×
Ad

ಹವಾಲಾ ಹಣ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಗೆ ಸಮನ್ಸ್

Update: 2021-07-02 22:18 IST
photo: twitter

ಹೊಸದಿಲ್ಲಿ: ವಿಧಾನಸಭಾ ಚುನಾವಣೆಗೆ(ಎ.6) ಮೊದಲು  ಹವಾಲಾ ಹಣದ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಮುಂದಿನ ವಾರ ಹಾಜರಾಗುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಕೇರಳ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈ 6 ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸುರೇಂದ್ರನ್ ಅವರಿಗೆ ನಿರ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತದಾನದ ಮರುದಿನ  ಎರ್ನಾಕುಲಂ-ತ್ರಿಶೂರ್ ಹೆದ್ದಾರಿಯಲ್ಲಿ ಗ್ಯಾಂಗ್ ವೊಂದು  25 ಲಕ್ಷ ರೂ. ಕದ್ದಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ.

ನಂತರ ಈ ಮೊತ್ತ ಸುಮಾರು  3.5 ಕೋಟಿ ರೂ.  ಹವಾಲಾ ಹಣದ ಭಾಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವ್ಯಕ್ತಿಯು ಬಿಜೆಪಿಗೆ ಹಣವನ್ನು ಸಾಗಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ಪಕ್ಷ ನಿರಾಕರಿಸಿದೆ.

"ಬಿಜೆಪಿಗೂ  ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಶೇಕಡಾ 100 ರಷ್ಟು ವಿಶ್ವಾಸ ಹೊಂದಿದ್ದರಿಂದ ಪೊಲೀಸರ ಯಾವುದೇ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಯಾರು ಕರೆ ಮಾಡಿದರೂ ನಾವು ಸಹಕರಿಸುತ್ತೇವೆ" ಎಂದು ಸುರೇಂದ್ರನ್ ಕಳೆದ ತಿಂಗಳು ಹೇಳಿದ್ದರು.

ಆದಾಗ್ಯೂ, ಎಡ ಹಾಗೂ  ಕಾಂಗ್ರೆಸ್ ಈ ವಿಷಯದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಚುನಾವಣೆಯಲ್ಲಿ ಬಿಜೆಪಿ ಕಪ್ಪು ಹಣವನ್ನು ಬಳಸಿದೆ ಎಂದು ಆರೋಪಿಸಿದ್ದವು.

ಈ ಪ್ರಕರಣದಲ್ಲಿ ರಾಜ್ಯದ ಬಿಜೆಪಿ ಮುಖಂಡರು ಸೇರಿದಂತೆ ಹಲವಾರು ಜನರನ್ನು ಪ್ರಶ್ನಿಸಲಾಗಿದೆ.

ಕೆ.ಸುರೇಂದ್ರನ್ ಅವರು ಅಭ್ಯರ್ಥಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಎರಡೂ ಪ್ರಕರಣಗಳನ್ನು ಕಳೆದ ತಿಂಗಳು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News