ಶಾಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸುವುದು ಉತ್ತಮ: ವಿಶ್ವಸಂಸ್ಥೆ ಸಲಹೆ

Update: 2021-07-02 17:21 GMT

ವಿಶ್ವಸಂಸ್ಥೆ, ಜು.2: ಮಕ್ಕಳಲ್ಲಿ ಸೋಂಕಿನ ಲಕ್ಷಣವಿಲ್ಲದಿದ್ದರೂ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುವುದು ಒಳಿತು. ಇದರಿಂದ ಆನ್ಲೈನ್ ಶಿಕ್ಷಣದ ಸಮಸ್ಯೆಯನ್ನು ದೂರಗೊಳಿಸಲು ಸಾಧ್ಯವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. 

ಕೊರೋನ ವೈರಸ್ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿರುವ ಸಂದರ್ಭದಲ್ಲಿ ಮಾತ್ರ ಶಾಲೆಗಳಲ್ಲಿ ಕೊರೋನ ಸೋಂಕು ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿತ್ತು. ಆದರೆ ಈಗ ಮಕ್ಕಳಲ್ಲಿ ಅಥವಾ ಶಾಲೆಯ ಬೋಧಕ, ಸಿಬ್ಬಂದಿ ವರ್ಗದವರಲ್ಲಿ ಸೋಂಕಿನ ಲಕ್ಷಣವಿಲ್ಲದಿದ್ದರೂ ಪಿಸಿಆರ್ ಅಥವಾ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯ ಅಗತ್ಯವಿದೆ. ಈ ಬಗ್ಗೆ ಚಿಂತನೆ ನಡೆಸಿ ಸೂಕ್ತ ಕ್ರಮ ಜಾರಿಗೊಳಿಸಲು ಇದು ಸಕಾಲವಾಗಿದೆ. ಇದರಿಂದ ಶಾಲೆಗಳನ್ನು ಮುಚ್ಚಿ ದೂರಶಿಕ್ಷಣದ ವ್ಯವಸ್ಥೆಗೆ ಮೊರೆಹೋಗುವುದು ತಪ್ಪುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಹ್ಯಾನ್ಸ್ ಕ್ಲೂಜ್ , ಯುನಿಸೆಫ್ ಹಾಗೂ ಯುನೆಸ್ಕೋ ಜತೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
 
ಶಾಲೆಗಳನ್ನು ದೀರ್ಘಾವಧಿಗೆ ಮುಚ್ಚುವುದು ನಮ್ಮ ಮಕ್ಕಳ, ಯುವಜನರ ಶಿಕ್ಷಣ, ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಗತಿಯ ಮೇಲೆ ಯಾವರೀತಿಯ ಪರಿಣಾಮ ಬೀರುತ್ತದೆ ಎಂಬುದು ನಮಗೆ ಅನುಭವವಾಗಿದೆ. ಸೋಂಕು ನಮ್ಮ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಕಿತ್ತುಕೊಳ್ಳಲು ಅವಕಾಶ ನೀಡಬಾರದು ಎಂದವರು ಹೇಳಿದ್ದಾರೆ. 

ದೂರ ಶಿಕ್ಷಣ ವ್ಯವಸ್ಥೆಯು ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮ ಹಾಗೂ ಶಾಲೆಯಿಂದ ಹೊರಗುಳಿಯುವ ಪ್ರಮಾಣದ ಬಗ್ಗೆ ಗಮನ ಹರಿಸುವಂತೆ ಹ್ಯಾನ್ಸ್ ನಿರಂತರ ಕರೆ ನೀಡುತ್ತಿದ್ದಾರೆ. ವಿಶ್ವಸಂಸ್ಥೆಯ ಯುರೋಪ್ ವಲಯದಲ್ಲಿ 53 ದೇಶಗಳಿದ್ದು ಇದರಲ್ಲಿ ಕೇಂದ್ರ ಏಶ್ಯಾದ ಹಲವು ರಾಷ್ಟ್ರಗಳಿವೆ. ಸೋಂಕು ವಿಪರೀತ ಉಲ್ಬಣಗೊಂಡು, ಬೇರೆ ಯಾವ ಕ್ರಮಗಳಿಂದಲೂ ನಿಯಂತ್ರಿಸಲು ಆಗದು ಎಂದಾಗ ಕಡೆಯ ಆಯ್ಕೆಯಾಗಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಬೇಕು ಎಂದವರು ಸಲಹೆ ನೀಡಿದ್ದಾರೆ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News