×
Ad

ವಾಯುಪಡೆ ʼಸೇನೆಯನ್ನು ಬೆಂಬಲಿಸುವ ಅಂಗವಷ್ಟೇʼ ಎಂಬ ಬಿಪಿನ್ ರಾವತ್ ಹೇಳಿಕೆಗೆ ಐಎಎಫ್ ಮುಖ್ಯಸ್ಥರ ತಿರಸ್ಕಾರ

Update: 2021-07-03 14:02 IST

ಹೊಸದಿಲ್ಲಿ,ಜು.3: ವಾಯುಪಡೆ(ಐಎಎಫ್)ಯು ಸೇನೆಯನ್ನು ಬೆಂಬಲಿಸುವ ಅಂಗವಾಗಿದೆ ಎಂದು ಬಣ್ಣಿಸುವ ಮೂಲಕ ಸೇನಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರು ಉದ್ದೇಶಿತ ಏಕೀಕೃತ ಥಿಯೇಟರ್ ಕಮಾಂಡ್ಗಳ ಕುರಿತು ಚರ್ಚೆಗೆ ಮರುಚಾಲನೆ ನೀಡಿದ್ದಾರೆ. ರಾವತ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭಡೌರಿಯಾ ಅವರು,ದೇಶದ ರಕ್ಷಣೆಯಲ್ಲಿ ವಾಯುಪಡೆಯು ಬೃಹತ್ ಪಾತ್ರವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಜಾಗತಿಕ ಭಯೋತ್ಪಾದನೆ ನಿಗ್ರಹ ಮಂಡಳಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್, ವಾಯುಪಡೆಯು ಭೂಸೇನೆಯ ಪಡೆಗಳಿಗೆ ಬೆಂಬಲವನ್ನು ಒದಗಿಸಬೇಕಾಗುತ್ತದೆ. ಫಿರಂಗಿ ದಳ ಅಥವಾ ಇಂಜಿನಿಯರ್ಗಳ ಗುಂಪು ಸೇನೆಯಲ್ಲಿನ ಹೋರಾಟ ವಿಭಾಗಗಳಿಗೆ ಬೆಂಬಲಿಸುವಂತೆ ವಾಯುಪಡೆಯೂ ಸಶಸ್ತ್ರ ಪಡೆಗಳಿಗೆ ಬೆಂಬಲವನ್ನೊದಗಿಸುವ ಅಂಗವಾಗಿದೆ ಎನ್ನುವುದನ್ನು ಮರೆಯಬಾರದು. ವಾಯುಪಡೆಗೆ ನಿರ್ದೇಶಿತ ಕಾರ್ಯವಿಧಾನವಿದೆ,ಅದು ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ ಮತ್ತು ಕಾರ್ಯಾಚರಣೆ ಸಂದರ್ಭಗಳಲ್ಲಿ ಭೂಸೇನೆಯ ಪಡೆಗಳನ್ನು ಬೆಂಬಲಿಸಬೇಕಾಗುತ್ತದೆ. ಇದು ಮೂಲವಿಷಯವಾಗಿದ್ದು,ಅದು ಇದನ್ನು ಮರೆಯಬಾರದು ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ನಂತರ ಮಾತನಾಡಿದ ಭದೌರಿಯಾ,ವಾಯುಪಡೆಯು ಬೆಂಬಲದ ಪಾತ್ರವೊಂದನ್ನೇ ನಿರ್ವಹಿಸುವುದಿಲ್ಲ. ಅದು ಬಹುದೊಡ್ಡ ಪಾತ್ರವನ್ನು ಹೊಂದಿದೆ. ಯಾವುದೇ ಸಮಗ್ರ ಯುದ್ಧ ಪ್ರದೇಶಗಳಲ್ಲಿ ಬೆಂಬಲವೊಂದೇ ವಿಷಯವಾಗಿರುವುದಿಲ್ಲ ಎಂದು ರಾವತ್ ಹೇಳಿಕೆಯನ್ನು ಪ್ರಸ್ತಾಪಿಸದೆ ಪ್ರತಿಕ್ರಿಯಿಸಿದರು. ಉದ್ದೇಶಿತ ಏಕೀಕೃತ ಥಿಯೇಟರ್ ಕಮಾಂಡ್ಗಳ ಕುರಿತು ವಾಯುಪಡೆಯು ಕೆಲವು ಆಕ್ಷೇಪಗಳನ್ನು ಹೊಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News