ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್‌ ಸಿಂಗ್‌ ಧಾಮಿ ಆಯ್ಕೆ

Update: 2021-07-03 16:12 GMT
Photo: Facebook

ಹೊಸದಿಲ್ಲಿ,ಜು.3: ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಶಾಸಕಾಂಗ ಪಕ್ಷವು ಶನಿವಾರ ಆಯ್ಕೆ ಮಾಡಿದೆ. ಪಕ್ಷದಲ್ಲಿಯ ಆಂತರಿಕ ಕಚ್ಚಾಟ ಮತ್ತು ಸೆ.10ರೊಳಗೆ ತಾನು ವಿಧಾನಸಭೆಗೆ ಆಯ್ಕೆಯಾಗುವ ಸಾಧ್ಯತೆ ಮಸುಕಾಗುತ್ತಿರುವ ಹಿನ್ನೆಲೆಯಲ್ಲಿ ತೀರಥ್ ಸಿಂಗ್ ರಾವತ್ ಅವರು ಶುಕ್ರವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ನಿಕಟರೆನ್ನಲಾಗಿರುವ ಧಾಮಿ ಅವರ ಹೆಸರನ್ನು ರಾಜಧಾನಿ ಡೆಹ್ರಾಡೂನ್ನಲ್ಲಿ ನಡೆದ 57 ಬಿಜೆಪಿ ಶಾಸಕರ ಸಭೆಯ ಬಳಿಕ ಘೋಷಿಸಲಾಗಿದೆ. 45ರ ಹರೆಯದ ಧಾಮಿ ಕುಮಾಂವ್ ಪ್ರದೇಶದ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು,ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶಿಯಾರಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಧಾಮಿ ರವಿವಾರ ಸಂಜೆ ಐದು ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಉತ್ತರಾಖಂಡ್ ರಾಜಭವನವು ತಿಳಿಸಿದೆ.

ಪ್ರತಿಯೊಬ್ಬರ ಸಹಕಾರದೊಂದಿಗೆ ತನ್ನ ಮುಂದಿರುವ ಸವಾಲುಗಳನ್ನು ಎದುರಿಸುವುದಾಗಿ ಧಾಮಿ ಆಯ್ಕೆಯ ಬಳಿಕ ತಿಳಿಸಿದರು. ಉತ್ತರಾಖಂಡ ವಿಧಾನಸಭಾ ಚುನಾವಣೆಗಳು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಡೆಯಲಿವೆ.

ತ್ರಿವೇಂದ್ರ ಸಿಂಗ್ ರಾವತ್ ಅವರ ವಿರುಧ್ಧ ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ನಲ್ಲಿ ಅದುವರೆಗೂ ಸಂಸದರಾಗಿದ್ದ ತೀರಥ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ತನ್ನ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಅವರು ಸೆ.10ರೊಳಗೆ ವಿಧಾನಸಭೆಗೆ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. 

ಆದರೆ,ವಿಶೇಷವಾಗಿ ಇನ್ನೊಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವಾಗ ಮತ್ತು ಕೋವಿಡ್ ಸಾಂಕ್ರಾಮಿಕದ ನಡುವೆ ಉಪಚುನಾವಣೆಯನ್ನು ನಡೆಸುವ ಸಾಧ್ಯತೆಗಳು ಕ್ಷೀಣಿಸತೊಡಗಿದ್ದವು. ಎರಡನೇ ಅಲೆಯ ನಡುವೆಯೇ ಮಾರ್ಚ್-ಎಪ್ರಿಲ್ನಲ್ಲಿ ಪಂಚರಾಜ್ಯಗಳಲ್ಲಿ ಚುನಾವಣೆಗಳನ್ನು ನಡೆಸುವ ಮೂಲಕ ಚುನಾವಣಾ ಆಯೋಗವು ವಿವಾದಕ್ಕೆ ಸಿಲುಕಿದ್ದು ಕೂಡ ಇದಕ್ಕೆ ಪುಷ್ಟಿನೀಡಿತ್ತು.
 
ತೀರಥ್ ಸಿಂಗ್ ರಾವತ್ ತನ್ನ 114 ದಿನಗಳ ಅಧಿಕಾರಾವಧಿಯಲ್ಲಿ ಹಲವು ವಿವಾದಗಳಿಗೂ ಕಾರಣರಾಗಿದ್ದರು. ಹರಿದ ಜೀನ್ಸ್‌ ಗಳ ವಿರುದ್ಧ ಸೇರಿದಂತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಅವರ ಕೆಲವೊಂದು ಹೇಳಿಕೆಗಳ ಕುರಿತು ಉತ್ತರಾಖಂಡ ಬಿಜೆಪಿ ನಾಯಕರು ದಿಲ್ಲಿ ನಾಯಕತ್ವಕ್ಕೆ ದೂರುಗಳನ್ನೂ ಸಲ್ಲಿಸಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News