ಉಪ್ಪಿನಂಗಡಿ: ಸಚಿವರಿಂದ ನದಿಗಳ ಸಂಗಮ ಸ್ಥಳ ಪರಿಶೀಲನೆ
ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮ ಸ್ಥಳದ ಸನಿಹದಲ್ಲಿ ಕಿಂಡಿ ಅಣೆಕಟ್ಟು ಕಟ್ಟಿ ಕೃಷಿ ಅಭಿವೃದ್ಧಿಯ ಜೊತೆಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಪ್ರೇರಣೆ ನೀಡಬೇಕೆಂಬ ಶಾಸಕ ಸಂಜೀವ ಮಟಂದೂರು ಸಲಹೆಯ ಕಾರ್ಯ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳಕ್ಕೆ ಶನಿವಾರ ಭೇಟಿ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದ.ಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಉಭಯ ನದಿಗಳ ಸಂಗಮ ಸ್ಥಳವನ್ನು ಸರ್ವ ಋತು ಜಲಾಶಯವನ್ನಗಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕೆಂಬ ಹಾಗೂ ನದಿಯಲ್ಲಿನ ಉದ್ಭವಲಿಂಗಕ್ಕೆ ಸರ್ವ ಋತು ಪೂಜೆ ಸಲ್ಲಿಸುವಂತಾಗಲು ಯೋಜನೆ ರೂಪಿಸಲು ಕ್ಷೇತ್ರದ ಶಾಸಕರಾದ ಸಂಜೀವ ಮಟಂದೂರು ಅತೀವ ಒತ್ತಡ ತರುತ್ತಿದ್ದಾರೆ. ಈ ಬಗ್ಗೆ ನಮ್ಮ ಇಲಾಖೆಯಿಂದ ಯಾವುದೆಲ್ಲಾ ಕಾರ್ಯಗಳನ್ನು ನಡೆಸಬಹುದೆಂಬ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿರುವೆನು. ನನ್ನ ಇಲಾಖೆಯ ಯಾವುದೇ ಕಾಮಗಾರಿಯಿಂದ ಮೊತ್ತ ಮೊದಲಾಗಿ ಕೃಷಿ ಕಾರ್ಯಕ್ಕೆ ಪ್ರಯೋಜನ ಲಭಿಸಬೇಕು. ಬಳಿಕ ಅದನ್ನು ಕುಡಿಯುವ ನೀರಿಗಾಗಿ ಯಾ ಪ್ರವಾಸೋದ್ಯಮಕ್ಕಾಗಿ ಬಳಸಬಹು ದಾಗಿದೆ. ಈ ಹಿನ್ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಪಂದಿಸಲು ಪ್ರಯತ್ನಿಸುವೆನೆಂದರು.
ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಪ್ರೇಮಲತಾ ಕಾಂಚನ, ಹರಿರಾಮಚಂದ್ರ , ಜಯಂತ ಪೆರೋಳಿ, ಸುನಿಲ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ದಡ್ಡು, ಗಣ್ಯರಾದ ಸುಂದರ ಗೌಡ , ಆದೇಶ್ ಶೆಟ್ಟಿ, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಇಲಾಖಾ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್‍ದಾಸ್, ಸಹಾಯಕ ಎಂಜಿನಿಯರ್‍ಗಳಾದ ವಿಷ್ಣು ಕಾಮತ್, ಶಿವಪ್ರಸಾದ್ ಮತ್ತಿತರರಿದ್ದರು.