ಮಂಗಳೂರು-ಯಶವಂತಪುರ ರೈಲಿಗೆ ಬೋಗಿ ಸೇರ್ಪಡೆ
ಮಂಗಳೂರು, ಜು.3: ಮಂಗಳೂರು- ಯಶವಂತಪುರ ವಿಶೇಷ ರೈಲಿಗೆ ಗಾಜಿನ ಛಾವಣಿ ಹೊಂದಿರುವ ಆಕರ್ಷಕ ವಿಸ್ತಾಡೋಮ್ ಬೋಗಿಗಳನ್ನು ಜು.7ರಿಂದ ಸೇರ್ಪಡೆಗೊಳಿಸಲಾಗುತ್ತಿದೆ. ವಿಸ್ತಾಡೋಮ್ ಬೋಗಿಗೆ ಬುಕ್ಕಿಂಗ್ ಜು.3ರಿಂದ ಆರಂಭವಾಗಿದೆ.
ಈ ವಿಶೇಷ ಬೋಗಿಯು 40 ಸುಖಾಸೀನ ಹಾಗೂ 360 ಡಿಗ್ರಿ ತಿರುಗುವ ಕುರ್ಚಿಗಳನ್ನು ಹೊಂದಿರುತ್ತದೆ. ಇದರಿಂದ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.
ವಾರಕ್ಕೆ ಮೂರು ಬಾರಿ ಸಂಚರಿಸುವ ಯಶವಂತಪುರ-ಕಾರವಾರ (ರೈಲು ನಂ. 06211/ 06212) ವಿಶೇಷ ರೈಲು ಜು.7ರಿಂದ ಯಶವಂತಪುರದಿಂದ ಹಾಗೂ ಜು.8ರಿಂದ ಮಂಗಳೂರು ಜಂಕ್ಷನ್‌ನಿಂದ ವಿಸ್ತಾಡೋಮ್ ಬೋಗಿಯೊಂದಿಗೆ ಸಂಚರಿಸಲಿದೆ.
ವಾರಕ್ಕೆ 3 ಬಾರಿ ಸಂಚರಿಸುವ ಯಶವಂತಪುರ- ಮಂಗಳೂರು ಜಂಕ್ಷನ್- ಯಶವಂತಪುರ (06575/ 06576) ವಿಶೇಷ ರೈಲಿಗೆ ಜು.8ರಂದು ಯಶವಂತಪುರದಿಂದ ಹಾಗೂ ಜ.9ರಂದು ಮಂಗಳೂರು ಜಂಕ್ಷನ್‌ನಿಂದ ವಿಸ್ತಾಡೋಮ್ ಬೋಗಿ ಜೋಡಿಸಲಾಗುತ್ತದೆ.
ಯಶವಂತಪುರ-ಮಂಗಳೂರು ಜಂಕ್ಷನ್ (06539) ರೈಲಿಗೆ ಯಶವಂತಪುರದಿಂದ ಜು.10ರಂದು ಹಾಗೂ ಮಂಗಳೂರು ಜಂಕ್ಷನ್- ಯಶವಂತಪುರ (06540) ಎಕ್ಸ್‌ಪ್ರೆಸ್‌ಗೆ ಜು.11ರಿಂದ ವಿಸ್ತಾಡೋಮ್ ಬೋಗಿ ಸೇರ್ಪಡೆಯಾಗಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.