ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಮನವಿ
ಮಂಗಳೂರು, ಜು.3: ರಾಜ್ಯ ಸರಕಾರದ ಕೋವಿಡ್-19 ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡುವಂತೆ ದ.ಕ.ಜಿಲ್ಲಾಧಿಕಾರಿಗೆ ದ.ಕ. ಮುಸ್ಲಿಂ ಎಸೋಸಿಯೇಶನ್‌ನ ನಿಯೋಗ ಮನವಿ ಸಲ್ಲಿಸಿದೆ.
ಕೊರೋನ ಸೋಂಕಿನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಮಸೀದಿಗಳನ್ನು ಮುಚ್ಚಲಾಗಿದೆ. ಹಾಗಾಗಿ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಮುಸ್ಲಿಮರು ಮನೆಯಲ್ಲೇ ನಮಾಝ್ ನಿರ್ವಹಿಸುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕೊರೋನ ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿರುವುದರಿಂದ ಸರಕಾರದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಮತ್ತು ನಿರ್ದೇಶನಗಳನ್ನು ಪಾಲಿಸಿಕೊಂಡು ಮಸೀದಿಗಳಲ್ಲಿ ಪ್ರಾರ್ಥನೆ ನಿರ್ವಹಿಸಲು ಅನುಮತಿ ನೀಡಬೇಕು ಎಂದು ಮುಸ್ಲಿಂ ಎಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ಎಸೋಸಿಯೇಶನ್‌ನ ಪದಾಧಿಕಾರಿಗಳಾದ ಎಸ್.ಎಂ. ಫಾರೂಕ್, ಅಬೂಬಕರ್ ಗ್ರೂಪ್ 4, ಬಿ.ಎಸ್.ಬಶೀರ್ ಅಹ್ಮದ್ ನಿಯೋಗದಲ್ಲಿದ್ದರು.