×
Ad

ಬೆಂಗಳೂರು-ಕಾರವಾರ ರೈಲಿಗೆ ‘ಪಂಚಗಂಗಾ ಎಕ್ಸ್‌ಪ್ರೆಸ್’ ನಾಮಕರಣ

Update: 2021-07-03 19:23 IST

ಉಡುಪಿ, ಜು.3: ಸಂಸದೆ ಶೋಭಾ ಕರಂದ್ಲಾಜೆ ಅವರ ಮನವಿ ಮೇರೆಗೆ ಬೆಂಗಳೂರು- ಕಾರವಾರ ನಡುವೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ‘ಪಂಚಗಂಗಾ ಎಕ್ಸ್‌ಪ್ರೆಸ್’ ಎಂದು ಕೇಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿದೆ.

ಕರ್ನಾಟಕದ ಪಶ್ಚಿಮ ಕರಾವಳಿಯನ್ನು ರಾಜ್ಯದ ರಾಜಧಾನಿಯೊಂದಿಗೆ ಸಂಪರ್ಕಿಸುವ ಕಾರವಾರ- ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ ಉಡುಪಿ ಜಿಲ್ಲೆಯ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿ ಹೆಸರಿನಿಂದ ಆಯ್ದ ‘ಪಂಚಗಂಗಾ ಎಕ್ಸ್‌ಪ್ರೆಸ್’ ಎಂದು ಹೆಸರಿಸಲಾಗಿದೆ.

ಕ್ಷೇತ್ರದ ಜನರ ಅಪೇಕ್ಷೆಯಂತೆ ಹಿಂದಿನ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿ ಕರಾವಳಿಯ ಹಲವು ಪುಣ್ಯಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥಕ್ಷೇತ್ರ, ಪ್ರವಾಸೋದ್ಯಮ, ಮೀನುಗಾರಿಕೆ, ಕೃಷಿ ಹಾಗು ಜನಜೀವನಕ್ಕೆ ಆಧಾರವಾಗಿದ್ದು, ಈ ಕಾರಣದಿಂದ ಬೆಂಗಳೂರು-ಕಾರವಾರ ರೈಲಿಗೆ ಪಂಚಗಂಗಾ ಹೆಸರಿಡಬೇಕು ಎಂದು ಅವರಲ್ಲಿ ಮನವಿ ಮಾಡಲಾಗಿತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ರೈಲಿಗೆ ನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ ಎಂದಿರುವ ಶೋಭಾ, ಇದಕ್ಕಾಗಿ ಕೇಂದ್ರ ಸರಕಾರ ಹಾಗು ರೈಲ್ವೆ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News