×
Ad

ಉಡುಪಿ: ವಾರಾಂತ್ಯ ಕರ್ಫ್ಯೂನಲ್ಲೂ ಹೆಚ್ಚಿದ ಜನ, ವಾಹನ ದಟ್ಟಣೆ

Update: 2021-07-03 20:27 IST

ಉಡುಪಿ, ಜು.3: ಉಡುಪಿ ಜಿಲ್ಲೆಯಲ್ಲಿ ಇಂದು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ಉಡುಪಿ ನಗರ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಜನ ಹಾಗೂ ವಾಹನ ಸಂಚಾರ ಅಧಿಕವಾಗಿತ್ತು. ಕೆಲವೊಂದು ಅಂಗಡಿಗಳು ಹೊರತು ಪಡಿಸಿ ಉಳಿದ ಎಲ್ಲ ವಾಣಿಜ್ಯ ಚಟುವಟಿಕೆಗಳು ಹಾಗೂ ಬಸ್ ಸಂಚಾರ ಸಾಮಾನ್ಯ ವಾಗಿತ್ತು.

ವಾರಾಂತ್ಯ ಕರ್ಫ್ಯೂ ಕುರಿತು ಜಿಲ್ಲಾಧಿಕಾರಿ ಜೂ.2ರಂದು ಕೊನೆಯ ಗಳಿಗೆಯಲ್ಲಿ ಹೇಳಿಕೆ ನೀಡಿ, ಮನೆ ಸಮೀಪದ ಅಂಗಡಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ ಮತ್ತು ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಅವಕಾಶ ಇಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಈ ಎಲ್ಲ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

ಮಧ್ಯಾಹ್ನ 2ಗಂಟೆಯವರೆಗೆ ಬಟ್ಟೆ, ಮೊಬೈಲ್, ಚಪ್ಪಲಿ, ಫನಿರ್ಚರ್, ಇಲೆಕ್ಟ್ರಾನಿಕ್ಸ್ ಅಂಗಡಿಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಅಂಗಡಿಗಳು ವ್ಯಾಪಾರ ನಡೆಸಿರುವುದರಿಂದ ಜನ ಸಂದಣಿ ಹಾಗೂ ವಾಹನ ದಟ್ಟಣೆ ಕಂಡು ಬಂತು. ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಅಲ್ಲೇ ಕುಳಿತು ಉಪಹಾರ, ಊಟ ಸೇವಿಸಲು ಅವಕಾಶ ನೀಡದೆ ಕೇವಲ ಪಾರ್ಸೆಲ್ ನೀಡಲಾಗುತ್ತಿತ್ತು.

ಈ ಮಧ್ಯೆ ಕೆಲವು ವ್ಯಕ್ತಿಗಳು ಹಾಗೂ ವಾಹನಗಳು ಅನಗತ್ಯವಾಗಿ ಓಡಾಡು ತ್ತಿರುವುದು ಕಂಡುಬಂತು. ಆದರೆ ನಗರದ ಕಲ್ಸಂಕ ಸೇರಿದಂತೆ ಯಾವುದೇ ಪ್ರಮುಖ ಭಾಗಗಳಲ್ಲಿಯೂ ಪೊಲೀಸ್ ತಪಾಸಣೆಗಳು ಇರಲಿಲ್ಲ.

ಸಿಟಿ ಬಸ್ ಸಂಚಾರ ಸ್ಥಗಿತ: ವಾರಾಂತ್ಯ ಕರ್ಫ್ಯೂನಲ್ಲಿ ಜನ ಸಂದಣಿ ಕಡಿಮೆ ಇರುವ ಉದ್ದೇಶದಿಂದ ಇಂದು ಉಡುಪಿ ನಗರದಲ್ಲಿ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಇಂದು ಸಿಟಿ ಬಸ್ ನಿಲ್ದಾಣ ಬಸ್ ಇಲ್ಲದೇ ಬಿಕೋ ಎನ್ನುತ್ತಿತ್ತು.
ಜಿಲ್ಲಾಧಿಕಾರಿ ಹೇಳಿಕೆ ಮಧ್ಯೆಯೂ ಇಂದು ಸರಕಾರಿ ಹಾಗೂ ಕೆಲವು ಖಾಸಗಿ ಬಸ್‌ಗಳು ಓಡಾಟ ನಡೆಸಿದ್ದವು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರದ ವರೆಗೆ ಸಂಚರಿಸುತ್ತಿದ್ದ 120 ಸರಕಾರಿ ಬಸ್‌ಗಳಲ್ಲಿ 70 ಬಸ್‌ಗಳು ಮಾತ್ರ ಇಂದು ರಸ್ತೆಗೆ ಇಳಿದಿದ್ದವು. ಆದರೆ ಪ್ರಯಾಣಿಕರ ಸಂಖ್ಯೆ ಬಹಳಷ್ಟು ವಿರಳವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆನರಾ ಬಸ್ ಮಾಲಕರ ಸಂಘದ ಕೆಲವೇ ಕೆಲವು ಸರ್ವಿಸ್ ಬಸ್‌ಗಳು ಮಾತ್ರ ನಿಲ್ದಾಣದಲ್ಲಿ ಕಂಡುಬಂತು. ಕರಾವಳಿ ಬಸ್ ಮಾಲಕರ ಸಂಘದ ಭಾರತಿ ಕಂಪೆನಿಯ ಬಸ್‌ಗಳು ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿರುವುದು ಕಂಡು ಬಂತು. ಆದರೆ ಕರ್ಫ್ಯೂ ಕಾರಣಕ್ಕೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News