×
Ad

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಕಲ ಸಿದ್ಧತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

Update: 2021-07-03 21:47 IST

ಮಂಗಳೂರು, ಜು.3: ದ.ಕ.ಜಿಲ್ಲೆಯಲ್ಲಿ ಜು.19, 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸುಸೂತ್ರವಾಗಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಎಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸಣ್ಣಪುಟ್ಟ ತಪ್ಪುಗಳಿಗೂ ಅವಕಾಶವಿರಬಾರದು. ಹಾಗಾಗಿ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು, ಕಳೆದ ಬಾರಿಯ ಪರೀಕ್ಷೆಯಲ್ಲಿ ಒಂದು ಕೊಠಡಿಯಲ್ಲಿ ಹದಿನೆಂಟು ವಿದ್ಯಾರ್ಥಿಗಳಿಗೆ ಅವಕಾಶವಿತ್ತು, ಈ ಬಾರಿ 12 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ಇದು ಪರಸ್ಪರ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಿದೆ ಎಂದು ಸಚಿವ ಕೋಟ ಹೇಳಿದರು.

ಕೇರಳದ ಗಡಿಭಾಗದಿಂದ ಪರೀಕ್ಷೆ ಬರೆಯಲು 441 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಕ್ರಮಕೈಗೊಳ್ಳಬೇಕು, ಸಾರಿಗೆ ಇಲಾಖೆಯಿಂದ ಪರೀಕ್ಷಾರ್ಥಿಗಳ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಯೋಜಿಸಿರುವ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಅವರಿರುವ ಸ್ಥಳಗಳಿಂದ ಕರೆತರಲು ಸಾರಿಗೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಖಾಸಗಿ ಬಸ್‌ಗಳ ಸಂಚಾರ ಅಂದು ರದ್ದಾಗದಂತೆ ನೋಡಿಕೊಳ್ಳಬೇಕು. ಕೇರಳದ ವಿದ್ಯಾರ್ಥಿಗಳನ್ನು ಕರೆತರಲಿರುವ ಅವರ ಪೋಷಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಬೇಕು. ಕೋವಿಡ್ ಪಾಸಿಟಿವ್ ಕಂಡುಬಂದ ವಿದ್ಯಾರ್ಥಿಗಳನ್ನು ಆ್ಯಂಬುಲೆನ್ಸ್ನಲ್ಲಿ ಕರೆತರಬೇಕು. ಈ ವಿದ್ಯಾರ್ಥಿಗಳಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಅಲ್ಲಿ ಪಿಪಿ ಕಿಟ್ ಹಾಕಿಕೊಂಡು ಅವರಿಗೆ ಪ್ರಶ್ನೆಪತ್ರಿಕೆ ನೀಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಯ್ಯಸ್ವಾಮಿ ಮಾತನಾಡಿ ಕಳೆದ ಬಾರಿ 1 ಕೊಠಡಿಯಲ್ಲಿ 18 ವಿದ್ಯಾರ್ಥಿ ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು ಈ ಬಾರಿ 12 ಮಕ್ಕಳಿಗೆ 1ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 179 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ 32,567 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕೋವಿಡ್ ಲಕ್ಷಣಗಳು ಬಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಒಟ್ಟು 3,708 ಸಿಬ್ಬಂದಿಗಳು ಸಿದ್ಧರಾಗಿದ್ದಾರೆ. 2,718 ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ದ.ಕ.ಜಿಪಂ ಸಿಇಒ ಕುಮಾರ್, ಶಾಸಕ ವೇದವ್ಯಾಸ ಕಾಮತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News