×
Ad

ಗ್ರಾಮ ಮಟ್ಟದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಯ ನಡೆಸಲಾಗುವುದು : ಶಾಸಕ ಯು.ಟಿ.ಖಾದರ್

Update: 2021-07-03 21:57 IST

ಬಂಟ್ವಾಳ, ಜು.3: ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್ ಪಡೆದರೆ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ನೋಂದಣಿ ಕಾರ್ಯ ನಡೆಸಲಾಗುವುದು ಎಂದು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದರು. 

ಅವರು ಶನಿವಾರ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಆಹಾರದ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು. 

ಮಾಹಿತಿ ಕೊರತೆಯಿಂದ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದು ಈ ನಿಟ್ಟಿನಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಮಾಹಿತಿ ನೀಡುವ ಕಾರ್ಯ ಮಾಡಬೇಕು. ವಲಸೆ ಕಾರ್ಮಿಕರಿಗೂ ಮುಂದಿನ ದಿನಗಳಲ್ಲಿ ನೆರವು ನೀಡುವ ನಿಟ್ಟಿನಲ್ಲಿ ಇಲಾಖೆ ಕಮೀಷನರ್ ಜತೆ  ಮಾತುಕತೆ ನಡೆಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಗೆ ಗುತ್ತಿಗೆದಾರರು ಶುಲ್ಕ ಪಾವತಿ ಸಿದ್ದು, ಅದರಿಂದ ಪ್ರಸ್ತುತ ನೆರವು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉಮ್ಮರ್ ಫಾರೂಕ್ ಫರಂಗಿಪೇಟೆ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,‌ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ., ಪುದು ಗ್ರಾಮ ಪಂಚಾಯತ್ ಸದಸ್ಯರು, ಮೇರಮಜಲು ಗ್ರಾಮ ಪಂಚಾಯತ್ ಸದಸ್ಯೆ ವೃಂದಾ ಮೊದಲಾದವರು ಉಪಸ್ಥಿತರಿದ್ದರು. 

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪುದು, ಕೊಡ್ಮಾಣ್ ಹಾಗೂ ಮೇರಮಜಲು ಗ್ರಾಮಗಳ 500 ಮಂದಿ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News