×
Ad

ಪುತ್ತೂರಿನಲ್ಲೊಂದು ಹನಿಟ್ರ್ಯಾಪ್ ಪ್ರಕರಣ ಬಯಲಿಗೆ: ಓರ್ವ ಯುವತಿಯ ಬಂಧನ, 6 ಮಂದಿ ಪರಾರಿ

Update: 2021-07-04 12:03 IST

ಪುತ್ತೂರು, ಜು.4: ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. 

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾದ ಯುವಕ. ಇವರು ವಂಚಕರಿಂದ 30 ಲಕ್ಷ ರೂ. ಕಳೆದುಕೊಂಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮುಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್‌ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬವರ ವಿರುದ್ಧ ಅಬ್ದುಲ್ ನಾಸಿರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿಯ ಬಂಧನ:

ಪ್ರಕರಣದ ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್ ನೇತೃತ್ವದ ಪೊಲೀಸರು ಆರೋಪಿಗಳ ಪೈಕಿ ತನೀಶಾ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ  ಘಟನೆ ಎಪ್ರಿಲ್ 12ರಂದು ನಡೆದಿದ್ದು, ಇದೀಗ ಪೊಲೀಸ್ ಮೇಲಾಧಿಕಾರಿಗಳ ಸೂಚನೆಯಂತೆ ಅಬ್ದುಲ್ ನಾಸಿರ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News