ರಾಜಸ್ಥಾನ ಕುಲಪತಿಗಳಿಗೆ ರಾಜ್ಯಪಾಲರ 'ದುಬಾರಿ ಉಡುಗೊರೆ'!

Update: 2021-07-04 07:24 GMT
Photo: indianexpress.com

ಜೈಪುರ: ಜುಲೈ ಒಂದರಂದು ರಾಜಸ್ಥಾನದ ರಾಜ್ಯಪಾಲ ಕಲರಾಜ್ ಮಿಶ್ರಾ ಅವರ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜೀವನಚರಿತ್ರೆ ಬಿಡುಗಡೆ ಬಳಿಕ ರಾಜ್ಯದ ಎಲ್ಲ 27 ವಿಶ್ವವಿದ್ಯಾನಿಲಯಗಳ ಕುಲಪತಿಗಳು ಅವರನ್ನು ಭೇಟಿ ಮಾಡಿದ ಬಳಿಕ ತಮ್ಮ ವಾಹನಗಳತ್ತ ವಾಪಸ್ಸಾದರು. ಅಲ್ಲಿ ಅವರಿಗೆ ಅಚ್ಚರಿ ಕಾದಿತ್ತು. ಅವರ ವಾಹನಗಳಲ್ಲಿ ಎರಡು ಕಂತೆ ಪುಸ್ತಕಗಳು ಅವರಿಗಾಗಿ ಕಾಯುತ್ತಿದ್ದವು. ಜತೆಗೆ ವಾಹನ ಚಾಲಕರಿಗೆ ಅವುಗಳ ಬಿಲ್ ಹಸ್ತಾಂತರಿಸಲಾಗಿತ್ತು!

ರಾಜ್ಯಪಾಲರ ಜೀವನ ಚರಿತ್ರೆಯ 19 ಪ್ರತಿಗಳು ಮತ್ತು 68,383 ರೂಪಾಯಿಗಳ ಬಿಲ್‍ಗಳಿದ್ದವು. "ನಿಮಿತ್ ಮಾತ್ರ ಹೂನ್ ಮೈನ್" (ನಾನು ಕೇವಲ ನಿಮಿತ್ತ ಮಾತ್ರ) ಕೃತಿಯನ್ನು ಹ್ಯಾಂಡ್‍ಕವರ್ ನಲ್ಲಿ ನೀಡಲಾಗಿತ್ತು. ಒಂದು ಹೆಚ್ಚುವರಿ ಪ್ರತಿಯನ್ನು ಉಚಿತವಾಗಿ ನೀಡಲಾಗಿತ್ತು ಎಂದು indianexpress.com ವರದಿ ಮಾಡಿದೆ.

"ರಾಜ್ಯಪಾಲರ ಜತೆಗಿನ ಸಭೆಯ ವೇಳೆ ಕೆಲವರು ಚಾಲಕನ ಹೆಸರು ಮತ್ತು ಫೋನ್ ನಂಬರ್ ಪಡೆದರು. ಅವರಿಗೆ ಆಹಾರ ಮತ್ತು ನೀರು ವಿತರಿಸುವ ಸಲುವಾಗಿ ಪಡೆದಿರಬೇಕು ಎಂದು ಭಾವಿಸಿದೆವು" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕುಲಪತಿಯೊಬ್ಬರು  Sunday Express ಗೆ ತಿಳಿಸಿದ್ದಾರೆ.

ಮನೆ ತಲುಪಿದಾಗ ಇನ್ನೊಂದು ಅಚ್ಚರಿ ಕಾದಿತ್ತು. ಅವರಿಗೆ ನೀಡಲಾದ ಬಿಲ್‍ನಲ್ಲಿ ಐದು ಶೀರ್ಷಿಕೆಗಳಿದ್ದವು. ಪುಸ್ತಕದ ಕಂತೆಯಲ್ಲಿ ಕೇವಲ ಜೀವನಚರಿತ್ರೆಯ ಕೃತಿಗಳಷ್ಟೇ ಇದ್ದವು. ಪತ್ರಿಕೆಗೆ ದೊರೆತ ಬಿಲ್‍ನಲ್ಲಿ ರೂ. 3,999ರಂತೆ 19 ಪುಸ್ತಕಗಳ ಬೆಲೆ 75,981 ರೂಪಾಯಿ ಎಂದು ನಮೂದಿಸಲಾಗಿತ್ತು. ಶೇಕಡ 10ರ ರಿಯಾಯ್ತಿ ಬಳಿಕ 68,383 ರೂಪಾಯಿ ಪಾವತಿಸಬೇಕಿತ್ತು.

ರಾಜ್ಯಪಾಲರ ಧೀರ್ಘಾವಧಿ ಓಎಸ್‍ಡಿ ಗೋವಿಂದರಾಮ್ ಜೈಸ್ವಾಲ್ ಅವರು ಕೃತಿಯ ಸಹ ಲೇಖಕರು. ಈ ಪುಸ್ತಕದ ಮಾರಾಟದಿಂದ ಬಂದ ಹಣವನ್ನು ರಾಜಸ್ಥಾನ ಮತ್ತು ಸಮಾಜ ವಿಜ್ಞಾನದ ಸಂಶೋಧನೆಗಳಿಗೆ ವೆಚ್ಚ ಮಾಡಲಾಗುವುದು. ಯಾವುದೇ ವೈಯಕ್ತಿಕ ಲಾಭಕ್ಕೆ ಬಳಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ರಾಜಸ್ಥಾನನದ ವಿವಿಗಳ ಖರೀದಿ ಪ್ರಕ್ರಿಯೆಗೆ ನಿಮಯಾವಳಿಗಳನ್ನು ಸಾರ್ವಜನಿಕ ಖರೀದಿ ಕಾಯ್ದೆ-2012ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಏಕಪಕ್ಷೀಯವಾಗಿ ಇಷ್ಟೊಂದು ಪುಸ್ತಕಗಳನ್ನು ವಿವಿಗಳ ಮೇಳೆ ಹೇಗೆ ಹೇರಲಾಗುತ್ತಿದೆ? 27 ವಿವಿಗಳು ತಾಂತ್ರಿಕ, ಆರೋಗ್ಯ, ಕೃಷಿ, ಪಶುವಿಜ್ಞಾನ, ಕಾನೂನು ಹೀಗೆ ಬೇರೆ ಬೇರೆ ಉದ್ದೇಶಕ್ಕೆ ಮೀಸಲಾಗಿರುವಂಥವು, ಇಷ್ಟೊಂದು ಪುಸ್ತಕಗಳಿಗೆ ವಿವಿ ಏಕೆ ಬಿಲ್ ಮೊತ್ತ ಭರಿಸಬೇಕು? ಯಾವ ಶೀರ್ಷಿಕೆಯಡಿ ವೆಚ್ಚ ಭರಿಸಬೇಕು" ಎಂದು ಕುಲಪತಿಯೊಬ್ಬರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News