×
Ad

ಉಡುಪಿ ಜು. 5ರಿಂದ ಕೋವಿಡ್ ನಿಯಮ ಪಾಲನೆಯೊಂದಿಗೆ ದೇವಸ್ಥಾನ, ಮಸೀದಿಗಳು ಆರಂಭ

Update: 2021-07-04 20:20 IST

ಉಡುಪಿ, ಜು.4: ರಾಜ್ಯ ಸರಕಾರದ ಆದೇಶದಂತೆ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ನಾಳೆಯಿಂದ ಉಡುಪಿ ಜಿಲ್ಲೆಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಹಾಗೂ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸ ಲಾಗಿದೆ.

ಕೊಲ್ಲೂರು ಮೂಕಾಂಬಿಕಾ, ಮಂದರ್ತಿ ದುರ್ಗಾಪರಮೇಶ್ವರಿ, ಕೋಟ ಅಮೃತೇಶ್ವರಿ, ಆನೆಗುಡ್ಡೆ ಕುಂಭಾಶಿ ವಿನಾಯಕ ದೇವಸ್ಥಾನ, ಅಂಬಲಪಾಡಿ ಜನಾರ್ದನ ಮಹಾಕಾಳಿ, ಕಡಿಯಾಳಿ ಮಹಿಷಮರ್ದಿನಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನ ಸೇವೆ ಕಲ್ಪಿಸಿದೆ. ತೀರ್ಥ ಮತ್ತ ಪ್ರಸಾದ, ಹಣ್ಣು ಕಾಯಿ ಸಮರ್ಪಣೆ ಸೇವೆ ಸಹಿತ ಇತ್ಯಾದಿ ಸೇವೆಗಳಿಗೆ ಅವಕಾಶ ಇಲ್ಲ ಎಂದು ದೇವಸ್ಥಾದ ಆಡಳಿತ ಮಂಡಳಿಗಳು ತಿಳಿಸಿವೆ.

‘ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವ ಕುರಿತು ಸುತ್ತಲಿನ ಪರಿಸರ ಹಾಗೂ ನೆರೆಯ ರಾಜ್ಯದ ಪರಿಸ್ಥಿತಿ ನೋಡಿಕೊಂಡು ಮುಂದಿನ ಒಂದು ವಾರದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ನಮಾಝ್‌ಗೆ ಅವಕಾಶ: ರಾಜ್ಯ ಸರಕಾರದ ಆದೇಶದಂತೆ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಪಾಡಿಕೊಂಡು ಹಾಗೂ ಮಸೀದಿಯ ಕಟ್ಟಡದ ಸಾಮರ್ಥ್ಯಕ್ಕೆ ಅನುಗುಣವಾಗಿ ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಜು.5ರಿಂದ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಉಡುಪಿ ಜಾಮೀಯ ಮಸೀದಿ, ಬ್ರಹ್ಮಗಿರಿ ನಾಯಕ್ ಕೆರೆ ಹಶಿಮಿ ಮಸೀದಿ, ಮೂಳೂರು, ಕಾಪು, ಕಾರ್ಕಳ, ಕುಂದಾಪುರ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳು ನಾಳೆಯಿಂದ ತೆರೆಯಲಿದ್ದು, ಕೋವಿಡ್ ನಿಯಮ ಪಾಲನೆಯೊಂದಿಗೆ

ನಮಾಝ್ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಸೀದಿಗಳ ಆಡಳಿತ ಕಮಿಟಿಗಳು ತಿಳಿಸಿವೆ.
‘ಜಿಲ್ಲೆಯ ಚರ್ಚ್‌ಗಳಲ್ಲಿ ಭಕ್ತರಿಗೆ ಪ್ರಾರ್ಥನೆ ಅವಕಾಶ ಕಲ್ಪಿಸಲು ಉಡುಪಿ ಜಿಲ್ಲಾಧಿಕಾರಿಗಳ ಆದೇಶ ಬಳಿಕ ನಿರ್ಧರಿಸಲಾಗುವುದು’ ಎಂದು ಉಡುಪಿ ಧರ್ಮಪ್ರಾಂತ್ಯದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News