ಮಸೀದಿಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸಲು ಖಾಝಿ ಮನವಿ
Update: 2021-07-04 22:04 IST
ಮಂಗಳೂರು, ಜು.4: ಕೊರೋನ ಸೋಂಕಿನ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ಗೆ ವಿಧಿಸಲ್ಪಟ್ಟ ನಿರ್ಬಂಧವನ್ನು ತೆರವುಗೊಳಿಸಿರುವ ರಾಜ್ಯ ಸರಕಾರವು ಜು. 5ರಿಂದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಮಾಡಲು ಅವಕಾಶ ಕಲ್ಪಿಸಿದೆ. ಈ ಸಂದರ್ಭ ಮಸೀದಿಯಲ್ಲಿ ನಮಾಝ್ ಮಾಡಲು ಬರುವವರು ಮನೆಯಲ್ಲೇ ವಝು (ಅಂಗಶುದ್ಧಿ) ಮಾಡಿ ಬರಬೇಕು, ಮನೆಯಿಂದಲೇ ಮುಸಲ್ಲಾ (ನಮಾಝ್ ಮಾಡುವಾಗ ನೆಲಕ್ಕೆ ಹಾಸುವ ವಸ್ತ್ರ) ತರಬೇಕು ಎಂದು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ಅಲ್ಲದೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸುರಕ್ಷಿತ ಅಂತರ ಕಾಪಾಡಬೇಕು. ಯಾವುದೇ ಕಾರಣಕ್ಕೂ ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ನಿರ್ಲಕ್ಷಿಸಬಾರದು. ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಕೊರೋನ ಸೋಂಕು ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಖಾಝಿ ಕರೆ ನೀಡಿದ್ದಾರೆ.