ದ.ಕ.ಜಿಲ್ಲೆ: ಜು.5ರಿಂದ ಖಾಸಗಿ-ಸರಕಾರಿ ಬಸ್ ಎಂದಿನಂತೆ ಓಡಾಟ
ಮಂಗಳೂರು, ಜೂ.4: ಕೋವಿಡ್ ಎರಡನೇ ಅಲೆ ತಡೆಗಟ್ಟಲು ಹೇರಿದ್ದ ನಿರ್ಬಂಧಗಳ ಪೈಕಿ ಬಹುತೇಕ ತೆರವುಗೊಳಿಸಿದ ಮೇರೆಗೆ ದ.ಕ.ಜಿಲ್ಲೆಯಲ್ಲೂ ಜು.5ರಿಂದ 19ರವರೆಗೆ ಬೆಳಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ಖಾಸಗಿ ಮತ್ತು ಸರಕಾರಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಲಿದೆ. ಆದರೆ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖಗೊಳ್ಳದ ಕಾರಣ ಕೊಡಗು ಜಿಲ್ಲೆಗೆ ಸರಕಾರಿ ಬಸ್‌ಗಳು ತೆರಳುತ್ತಿಲ್ಲ. ಉಳಿದಂತೆ ಎಲ್ಲಾ ಜಿಲ್ಲೆಗಳಿಗೂ ಸರಕಾರಿ ಬಸ್‌ಗಳು ಆರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಸ್ಸಾರ್ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಈಗಾಗಲೇ ಬೆಂಗಳೂರಿಗೆ ರಾತ್ರಿ ಬಸ್ ಸಂಚಾರ ಆರಂಭ ಗೊಂಡಿದೆ. ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ತಲಾ ನಾಲ್ಕೈದು ಬಸ್‌ಗಳು ಬೆಂಗಳೂರಿಗೆ ಸಂಚಾರ ಆರಂಭಿಸಿವೆ.
ರವಿವಾರ ಕೂಡ ಎರಡೂ ವಿಭಾಗದಿಂದ ಸರಕಾರಿ ಬಸ್‌ಗಳು ಬೆಂಗಳೂರಿಗೆ ತೆರಳಿವೆ. ಅಲ್ಲದೆ ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಕಾರಣ ಮೈಸೂರು, ಮಂಡ್ಯ ಮಾರ್ಗದಲ್ಲಿ ಬಸ್ ಸಂಚರಿಸಿಲ್ಲ.
ಈ ಮಧ್ಯೆ ಹಾಸನ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದ ಕಾರಣ ಅಲ್ಲಿನ ಜಿಲ್ಲಾಡಳಿತ ಕೂಡ ರಾತ್ರಿ ಸಂಚಾರಕ್ಕೆ ಅನುಮತಿ ನಿರಾಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ರಾತ್ರಿ ನೇರ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವಂತೆ ಕೆಎಸ್ಸಾರ್ಟಿಸಿ ಘಟಕಗಳು ಮನವಿ ಮಾಡಿವೆ.
ಖಾಸಗಿ ಬಸ್‌ಗಳ ಕೊನೆಯ ಟ್ರಿಪ್ ಕಡಿತ?
ಸರಕಾರದ ಅನ್‌ಲಾಕ್ ಆದೇಶದಲ್ಲಿ ರಾತ್ರಿ 9 ಗಂಟೆವರೆಗೆ ಬಸ್ ಓಡಿಸಲು ಅನುಮತಿಸಲಾಗಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ರಾತ್ರಿ 9ರ ಒಳಗೆ ಬಸ್ ಸಂಚಾರ ನಿಲುಗಡೆಯಾಗಬೇಕು. ಹಾಗಾಗಿ ಕೊನೆಯ ಟ್ರಿಪ್‌ನ್ನು ಕಡಿತಗೊಳಿಸುವ ಸಾಧ್ಯತೆ ಇದೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ರಾಜ್ಯ ಸರಕಾರದ ಪರಿಷ್ಕೃತ ಆದೇಶದಲ್ಲಿ ರಾತ್ರಿ 9 ಗಂಟೆವರೆಗೆ ಬಸ್ ಓಡಿಸಲು ಅನುಮತಿಸಲಾಗಿದೆ. ಜಿಲ್ಲೆಯಲ್ಲಿ ರಾತ್ರಿ 9ರ ಒಳಗಾಗಿ ಬಸ್ ಸಂಚಾರ ನಿಲುಗಡೆಯಾಗಬೇಕು. ಹಾಗಾಗಿ ಕೊನೆಯ ಟ್ರಿಪ್‌ನ್ನು ಕಡಿತ ಮಾಡುವ ಅಗತ್ಯವಿದೆ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ಸೋಮವಾರ 80ರಿಂದ 100ರಷ್ಟು ಖಾಸಗಿ ಬಸ್‌ಗಳು ಸಂಚರಿಸುವ ಸಾಧ್ಯತೆ ಇದೆ. ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿ ಬಸ್‌ಗಳು ಓಡಾಟ ಮಾಡಲಿದೆ ಎಂದು ತಿಳಿಸಿದ್ದಾರೆ.