×
Ad

ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಖಂಡನೆ

Update: 2021-07-04 22:15 IST

ಮಂಗಳೂರು, ಜು.4: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗವು ಎ.1ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 30 ಪೈಸೆ ಏರಿಸಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಟೀಕಿಸಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಸರಕಾರ ವಿದ್ಯುತ್ ದರವನ್ನು ಮೂರು ಬಾರಿ ಏರಿಕೆ ಮಾಡಿದೆ. ವಿದ್ಯುತ್ ಖರೀದಿ ದರ ಇಳಿಮುಖ ವಾಗಿರುವಾಗಲೇ ವಿದ್ಯುತ್ ಬಳಕೆ ದರ ಏರಿಸಿರುವುದು ಜನತೆಯ ಮೇಲೆ ಹೇರಿದ ಇನ್ನೊಂದು ಹೊರೆಯಾಗಿದೆ. ರಾಜ್ಯ ಮತ್ತು ದೇಶದಲ್ಲಿ ವಿದ್ಯುತ್ ಉತ್ಪಾದನಾ ವಲಯಗಳಾದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಿರುವ ವಿದ್ಯುತನ್ನು ಆಯೋಗವು 2011-12ರ ಅವಧಿಯಲ್ಲಿ ಯೂನಿಟ್‌ಗೆ 5.50 ರೂ.ನಂತೆ ಖರೀದಿಸುತ್ತಿತ್ತು. ಈಗ ಖರೀದಿ ದರ 3.10 ರೂ.ಗೆ ಇಳಿದಿದೆ.

ಸೋಲಾರ್ ವಿದ್ಯುತ್ತನ್ನು 17 ರೂ.ಗೆ ಖರೀದಿಸುತ್ತಿದ್ದದ್ದನ್ನು ಈಗ ಯೂನಿಟ್‌ಗೆ 2 ರೂ.ನಂತೆ ಖರೀದಿಸಲಾಗುತ್ತಿದೆ. ವಿದ್ಯುತ್ ಮಾರಾಟದ ಬೆಲೆ ಕಡಿಮೆಯಾದಾಗ ಪ್ರಸರಣ ಆಯೋಗವು ವಿದ್ಯುತ್ ದರವನ್ನು ಇಳಿಕೆ ಮಾಡಬೇಕು. ಆದರೆ ಸರಕಾರ ಲಾಕ್‌ ಡೌನ್ ಅವಧಿಯಲ್ಲೇ ವಿದ್ಯುತ್ ದರ ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News