×
Ad

ನೈಜೀರಿಯಾ: ಬೆಲೆಯೇರಿಕೆ ಸಮಸ್ಯೆಯಿಂದ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಳ; ವಿಶ್ವಬ್ಯಾಂಕ್ ವರದಿ

Update: 2021-07-04 23:23 IST

ಅಬುಜ, ಜು.4: ಕೊರೋನ ಸೋಂಕಿನ ಬಿಕ್ಕಟ್ಟಿನಿಂದ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳುವ ಜತೆಗೇ ಹಣದುಬ್ಬರೂ ಹೆಚ್ಚುತ್ತಿರುವಂತೆಯೇ ಬೆಲೆಯೇರಿಕೆಯ ಸಮಸ್ಯೆ ನೈಜೀರಿಯಾದಂತಹ ದೇಶಗಳ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಸುಮಾರು 210 ಮಿಲಿಯನ್ ಜನರಿರುವ, ಆಫ್ರಿಕಾದ ಅತ್ಯಧಿಕ ಜನಸಂಖ್ಯೆಯ ದೇಶವಾಗಿರುವ ನೈಜೀರಿಯಾದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಜಾಗತಿಕ ತೈಲ ದರದಲ್ಲಿ ಇಳಿಕೆ ಮತ್ತು ಕೊರೋನ ಸಾಂಕ್ರಾಮಿಕ- ಈ ಅವಳಿ ಆಘಾತದಿಂದ ತತ್ತರಿಸಿರುವ ನೈಜೀರಿಯಾದಲ್ಲಿ ಹಣದುಬ್ಬರ ಮತ್ತು ಆಹಾರದ ಬೆಲೆಯೇರಿಕೆ ಸಮಸ್ಯೆಯಿಂದಾಗಿ 2021ರಲ್ಲಿ ಮತ್ತೂ 7 ಮಿಲಿಯನ್ ಜನತೆ ಬಡತನ ರೇಖೆಗಿಂತ ಕೆಳಗಿನ ಹಂತಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಕೊರೋನ ಸೋಂಕಿನ ಸಮಸ್ಯೆ ಆರಂಭವಾದಂದಿನಿಂದ ನೈಜೀರಿಯಾದಲ್ಲಿ ಆಹಾರದ ಬೆಲೆಗಳು 22%ಕ್ಕೂ ಹೆಚ್ಚು ಏರಿಕೆ ಕಂಡಿವೆ. ದೇಶದ ಬಹುತೇಕ ಜನರಿಗೆ ಕುಟುಂಬದ ಹೊಟ್ಟೆಹೊರೆಯುವುದು ದಿನನಿತ್ಯದ ಸವಾಲಾಗಿ ಪರಿಣಮಿಸಿದೆ. ಇದರ ಜೊತೆಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ನೈಜೀರಿಯಾದಲ್ಲಿ ಅಧಿಕವಾಗಿದೆ. ಕೊರೋನ ಸೋಂಕಿನ ಸಮಸ್ಯೆಗಿಂತಲೂ ಮೊದಲೇ ನೈಜೀರಿಯಾದಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಳವಳಕಾರಿ ಸ್ಥಿತಿಯಲ್ಲಿತ್ತು. ಈ ದೇಶದ ಮೂವರು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದಾಗಿ ಬೆಳವಣಿಗೆ ಕುಂಠಿತಗೊಳ್ಳುವ ಸಮಸ್ಯೆಗೆ ಸಿಲುಕಿದೆ. ಇದರ ಪರಿಣಾಮ, ಸುಮಾರು 17 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ಆಫ್ರಿಕಾದಲ್ಲಿ ಗರಿಷ್ಟ ಪ್ರಮಾಣವಾಗಿದ್ದು ವಿಶ್ವದಲ್ಲಿ 2ನೇ ಗರಿಷ್ಟ ಪ್ರಮಾಣವಾಗಿದೆ.

ಪ್ರತೀ ದಿನದ ಆಪ್ತಸಮಾಲೋಚನಾ ಕಾರ್ಯಕ್ರಮದ ಸಂದರ್ಭ ಅಪೌಷ್ಟಿಕತೆಯಿಂದ ಬಳಲುವ ಕನಿಷ್ಟ 7 ಮಕ್ಕಳ ಬಗ್ಗೆ ಮಾಹಿತಿ ದೊರಕುತ್ತದೆ. ಮುಂದಿನ ಕೆಲ ತಿಂಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ಬಗ್ಗೆ ಅನುಮಾನವಿಲ್ಲ ಎಂದು ಲಾಗೋಸ್ ಐಲ್ಯಾಂಡ್‌ನ ಮಕ್ಕಳ ಆಸ್ಪತ್ರೆಯ ಅಧಿಕಾರಿ ಎಮಿಯೊಲೊ ಒಗುಂಸೊಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News