ಮೇಕೆದಾಟು ಯೋಜನೆ ಮುಂದುವರಿಸಲು ಯಡಿಯೂರಪ್ಪ ಮುಂದಾಗಬೇಕು: ಡಿ.ಕೆ.ಶಿವಕುಮಾರ್
ಮಂಗಳೂರು, ಜು.5: ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆಯನ್ನು ರಾಜ್ಯ ಸರಕಾರ ಕೈಗೆತ್ತಿಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಈ ಬಗ್ಗೆ ಯಡಿಯೂರಪ್ಪ ತಕ್ಷಣ ಕ್ರಮ ಕೈಗೊಳ್ಳ ಬೇಕು. ತಮಿಳುನಾಡು ಸರಕಾರದ ಮುಂದೆ ಭಿಕ್ಷೆ ಬೇಡ ಬೇಕಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅವರು ಇಂದು ದ.ಕ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮೇಕೆದಾಟು ಯೋಜನೆಯ ವಿಚಾರದಲ್ಲಿ ವಿಳಂಬ ಸಲ್ಲದು.ಈ ಯೋಜನೆಗಾಗಿ ಕರ್ನಾಟಕದಲ್ಲಿ ಭೂಸ್ವಾಧೀನ ಮಾಡಿಕೊಳ್ಳ ಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಈ ಯೋಜನೆ ಆರಂಭಿಸುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ರಾಜ್ಯದ ಹಣ, ಭೂಮಿ ಎಲ್ಲಾ ನಮ್ಮ ಬಳಿ ಇರುವಾಗ ಯಡಿಯೂರಪ್ಪ ತಮ್ಮ ಬದ್ಧತೆಯನ್ನು ತೋರಿಸಬೇಕು ತಮಿಳು ನಾಡು ಸರಕಾರದ ಮುಂದೆ ಮನವಿ ಮಾಡಿ ಕಾಲ ಹರಣ ಮಾಡುವ ಅಗತ್ಯ ಇಲ್ಲ. ತಮಿಳುನಾಡಿನ ಡಿ.ಎಂ.ಕೆ, ಎಡಿಎಂಕೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಲ್ಲಿನ ಜನರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಆದುದರಿಂದ ನಮ್ಮ ರಾಜ್ಯದ ಮುಖ್ಯವಾಗಿ ಬೆಂಗಳೂರಿನ ಜನರ ಕುಡಿಯುವ ನೀರಿನ ಪೂರೈಕೆಗಾಗಿ ತಕ್ಷಣ ರಾಜ್ಯ ಸರಕಾರ ಟೆಂಡರು ಕರೆದು ಯೋಜನೆಗೆ ಚಾಲನೆ ನೀಡಬೇಕು. ರಾಜ್ಯದಲ್ಲಿ ನಿಜವಾಗಿ ಡಬ್ಬಲ್ ಇಂಜಿನ್ ಸರಕಾರ ಇರುವಾಗ ಕೇಂದ್ರ, ರಾಜ್ಯ ಎರಡು ಕಡೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಮೊದಲು ಮೇಕೆದಾಟು ಯೋಜನೆ ತಕ್ಷಣ ಚಾಲನೆ ನೀಡಲಿ ಎಂದರು.
ಈ ಸಂದರ್ಭ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಮಿಥುನ್ ರೈ, ಅಭಯ ಚಂದ್ರ ಜೈನ್ , ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಶಕುಂತ ಳಾ ಶೆಟ್ಟಿ, ಐವನ್ ಡಿ ಸೋಜ, ಪಿ.ವಿ.ಮೋಹನ್, ಕಣಚೂರು ಮೋನು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.