ಹಾಂಕಾಂಗ್ : ಬಾಂಬ್ ತಯಾರಿಸುತ್ತಿದ್ದ ಆರೋಪ

Update: 2021-07-06 16:50 GMT

ಹಾಂಕಾಂಗ್(ಚೀನಾ) ಜು.6: ಪ್ರಬಲವಾದ ಬಾಂಬ್ ತಯಾರಿಸಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ 6 ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳ ಸಹಿತ 9 ಮಂದಿಯನ್ನು ಭಯೋತ್ಪಾದನೆ ಚಟುವಟಿಕೆಗೆ ಸ್ಫೋಟಕ ಬಳಸುವ ಸಂಚು ಹೂಡಿದ ಆರೋಪದಲ್ಲಿ ಬಂಧಿಸಿರುವುದಾಗಿ ಮಂಗಳವಾರ ಪೊಲೀಸರು ಹೇಳಿದ್ದಾರೆ. 

ಬಂಧಿತರಲ್ಲಿ 15ರಿಂದ 39 ವರ್ಷದವರೆಗಿನ 5 ಪುರುಷರು ಮತ್ತು 4 ಮಹಿಳೆಯರಿದ್ದಾರೆ. ಟಿಎಟಿಪಿ ಎಂಬ ಅತ್ಯಧಿಕ ಶಕ್ತಿಶಾಲಿ ಸ್ಫೋಟಕವನ್ನು ಹಾಸ್ಟೆಲ್ ನೊಳಗೆ ಗುಪ್ತವಾಗಿ ನಿರ್ಮಿಸಿದ ಪ್ರಯೋಗಾಲಯದಲ್ಲಿ ತಯಾರಿಸಲು ಪ್ರಯತ್ನಿಸುತ್ತಿದ್ದ ದುಷ್ಕರ್ಮಿಗಳ ವಿರುದ್ಧ ಸೋಮವಾರ ಕಾರ್ಯಾಚರಣೆ ನಡೆಸಲಾಗಿದೆ. 

ಬಂಧಿತ 9 ಮಂದಿ ‘ರಿಟರ್ನಿಂಗ್ ವೇಲಿಯಂಟ್’ (ಹಿಂದಿರುಗಿದ ಧೀರ) ಎಂದು ಕರೆಸಿಕೊಳ್ಳುವ, ಹಾಂಕಾಂಗ್ ಸ್ವತಂತ್ರ ರಾಷ್ಟ್ರವಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ತಂಡದ ಸದಸ್ಯರು. ಸುರಂಗ ಮಾರ್ಗ, ರೈಲ್ವೇ ನೆಟ್ವರ್ಕ್, ನ್ಯಾಯಾಲಯ ಸೇರಿದಂತೆ ಸಾರ್ವಜನಿಕ ವ್ಯವಸ್ಥೆಯ ಮೇಲೆ ದಾಳಿ ನಡೆಸುವ ಉದ್ದೇಶ ಇವರದ್ದಾಗಿತ್ತು ಎಂದು ನಗರದ ನೂತನ ರಾಷ್ಟ್ರೀಯ ಭದ್ರತಾ ತಂಡದ ಹಿರಿಯ ಅಧೀಕ್ಷಕ ಸ್ಟೀವ್ ಲೀ ಹೇಳಿದ್ದಾರೆ. ಚೀನಾದ ನಿಯಂತ್ರಣದಲ್ಲಿರುವ ಹಾಂಕಾಂಗ್ ನಲ್ಲಿ 2019ರಲ್ಲಿ ಬೃಹತ್ ಸರಕಾರಿ ವಿರೋಧಿ, ಪ್ರಜಾಪ್ರಭುತ್ವದ ಪರವಾದ ಪ್ರತಿಭಟನೆ ನಡೆದಿತ್ತು. 

ಸಾಮೂಹಿಕ ಬಂಧನ ಕಾರ್ಯಾಚರಣೆ ಹಾಗೂ ನೂತನ ರಾಷ್ಟೀಯ ಭದ್ರತಾ ಕಾನೂನಿನಿಂದ ಈ ಪ್ರತಿಭಟನೆಯನ್ನು ಹತ್ತಿಕ್ಕಲಾಗಿತ್ತು.
 =====

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News