‘ನಮ್ಮ ಭಯೋತ್ಪಾದಕರು’ ಮತ್ತು ‘ನಿಮ್ಮ ಭಯೋತ್ಪಾದಕರು’ ಯುಗಕ್ಕೆ ಮರಳಬೇಡಿ: ವಿಶ್ವಸಂಸ್ಥೆಯಲ್ಲಿ ಭಾರತದ ಕಿವಿಮಾತು

Update: 2021-07-07 16:20 GMT

ವಿಶ್ವಸಂಸ್ಥೆ,ಜು.7: ಭೀತಿವಾದವನ್ನು ಸಮರ್ಥಿಸುವುದು ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಲು ಬೆಂಬಲ ನೀಡುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಹೇಳಿರುವ ಭಾರತವು,ಭೀತಿವಾದದ ಬೆದರಿಕೆಯು ಗಂಭೀರ ಮತ್ತು ಸಾರ್ವತ್ರಿಕವಾಗಿದೆ ಎಂದು ತಿಳಿಸಿದೆ.

‌ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಜಾಗತಿಕ ಭೀತಿವಾದ ನಿಗ್ರಹ ರಣನೀತಿಯ ಏಳನೇ ಪುನರ್ಪರಿಶೀಲನೆ ಕುರಿತು ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ಗುರುಮೂರ್ತಿ ಅವರು,9/11ರ ದಾಳಿಗೆ ಮುನ್ನ ಜಾಗತಿಕ ಸಮುದಾಯವು ‘ನಿಮ್ಮ ಭಯೋತ್ಪಾದಕರು ’ ಮತ್ತು ‘ನಿಮ್ಮ ಭಯೋತ್ಪಾದಕರ ’ಎಂಬ ಭೇದದಲ್ಲಿ ಹಂಚಿಹೋಗಿತ್ತು ಎಂದು ನೆನಪಿಸಿದರಲ್ಲದೆ,‘20 ವರ್ಷಗಳ ಬಳಿಕ ಜನಾಂಗೀಯ ಪ್ರೇರಿತ ಹಿಂಸಾತ್ಮಕ ಉಗ್ರವಾದ,ಹಿಂಸಾತ್ಮಕ ರಾಷ್ಟ್ರವಾದ,ಬಲಪಂಥೀಯ ಉಗ್ರವಾದ ಇತ್ಯಾದಿಗಳಂತಹ ‘ಉದಯೋನ್ಮುಖ ಬೆದರಿಕೆಗಳ ’ಸೋಗಿನಲ್ಲಿ ಹೊಸ ಶಬ್ದಾವಳಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಸದಸ್ಯ ರಾಷ್ಟ್ರಗಳು ಇತಿಹಾಸವನ್ನು ಮರೆಯುವುದಿಲ್ಲ ಮತ್ತು ಭೀತಿವಾದವನ್ನು ಮತ್ತೊಮ್ಮೆ ವಿವಿಧ ವರ್ಗಗಳಲ್ಲಿ ವಿಭಜಿಸುವುದಿಲ್ಲ,ನಮ್ಮನ್ನು ‘ನಿಮ್ಮ ಭಯೋತ್ಪಾದಕರು’ ಮತ್ತು ‘ನಮ್ಮ ಭಯೋತ್ಪಾದಕರು ’ಯುಗಕ್ಕೆ ಮರಳಿ ಒಯ್ಯುವುದಿಲ್ಲ ಮತ್ತು ಕಳೆದೆರಡು ದಶಕಗಳಲ್ಲಿ ನಾವು ಸಾಧಿಸಿರುವ ಪ್ರಗತಿಯನ್ನು ಅಳಿಸುವುದಿಲ್ಲ ಎಂದು ನಾನು ಆಶಿಸುತ್ತೇನೆ ’ ಎಂದರು ಹೇಳಿದರು.
 
ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾದ ಭೀತಿವಾದದ ವ್ಯಾಖ್ಯೆಯ ಅನುಪಸ್ಥಿತಿಯು ಅದನ್ನು ನಿರ್ನಾಮಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ. ಭಾರತವು ಪ್ರತಿಪಾದಿಸಿರುವ ಅಂತರರಾಷ್ಟ್ರೀಯ ಭೀತಿವಾದದ ಕುರಿತು ಸಮಗ್ರ ನಿರ್ಣಯ ಸ್ವೀಕಾರವನ್ನು ತಡೆಯುತ್ತಿರುವ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಪ್ರಸಕ್ತ ಕಾರ್ಯತಂತ್ರವು ವಿಫಲಗೊಂಡಿದೆ ಎಂದು ಗುರುಮೂರ್ತಿ ಬೆಟ್ಟು ಮಾಡಿದರು.
 
2006ರಲ್ಲಿ ಅಂಗೀಕರಿಸಲಾದ ಜಾಗತಿಕ ಭೀತಿವಾದ ನಿಗ್ರಹ ರಣನೀತಿಯಲ್ಲಿ ಭೀತಿವಾದವನ್ನು ಅದರ ಎಲ್ಲ ರೂಪಗಳಲ್ಲಿ ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸಬೇಕು,ಭೀತಿವಾದದ ಕೃತ್ಯಗಳ ಹಿಂದೆ ಯಾವುದೇ ಉದ್ದೇಶವಿದ್ದರೂ ಅಥವಾ ಅವುಗಳನ್ನು ಯಾರೇ ಎಸಗಿದ್ದರೂ ಅವುಗಳಿಗೆ ಯಾವುದೇ ವಿನಾಯಿತಿ ಅಥವಾ ಸಮರ್ಥನೆಯಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಾಗಿತ್ತು. ಭೀತಿವಾದದ ಪಿಡುಗನ್ನು ಯಾವುದೇ ಧರ್ಮ,ರಾಷ್ಟ್ರೀಯತೆ,ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಗುರುತಿಸುವಂತಿಲ್ಲ ಎಂದೂ ಒಪ್ಪಿಕೊಳ್ಳಲಾಗಿತ್ತು ಎಂದು ಹೇಳಿದ ಗುರುಮೂರ್ತಿ,ಜಾಗತಿಕ ಭೀತಿವಾದ ನಿಗ್ರಹ ರಣನೀತಿಯಲ್ಲಿ ಧಾರ್ಮಿಕ ‘ಫೋಬಿಯಾ’ಗಳನ್ನು ಉಲ್ಲೇಖಿಸಲಾಗಿದೆ ಮತ್ತು ಅವುಗಳನ್ನು ಮೂರು ಅಬ್ರಹಾಮಿಕ್ ಧರ್ಮಗಳಿಗೆ ಸೀಮಿತಗೊಳಿಸಲಾಗಿದೆ. ಇತರ ಧರ್ಮಗಳ ಜೊತೆಗೆ ಬೌದ್ಧ,ಸಿಖ್ ಮತ್ತು ಹಿಂದು ಧರ್ಮಗಳ ವಿರುದ್ಧ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸಾತ್ಮಕ ಭಯೋತ್ಪಾದಕ ದಾಳಿಗಳನ್ನು ಗುರುತಿಸಲು ಈ ಉನ್ನತ ಸಂಸ್ಥೆಯು ಮತ್ತೊಮ್ಮೆ ವಿಫಲಗೊಂಡಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳು ಧಾರ್ಮಿಕ ಫೋಬಿಯಾಗಳ ಪರ ಪಕ್ಷ ವಹಿಸಲು ಸಂಸ್ಥೆ ಅಥವಾ ವೇದಿಕೆಯಲ್ಲ,ವಾಸ್ತವದಲ್ಲಿ ಅದು ಭಯೋತ್ಪಾದನೆಯ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕಾಗಿ ಮಾನವತೆ ಮತ್ತು ಅನುಕಂಪದ ಸಾರ್ವತ್ರಿಕ ನೀತಿಗಳ ಆಧಾರಿತ ಸಂಸ್ಕೃತಿಯನ್ನು ಪೋಷಿಸಬೇಕು ಎಂದು ಗುರುಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News