ಹೈಟಿ ಅಧ್ಯಕ್ಷ ಮೊಯಿಸ್ ಹತ್ಯೆ ಪ್ರಕರಣ: 4 ಶಂಕಿತ ಆರೋಪಿಗಳ ಗುಂಡಿಕ್ಕಿ ಹತ್ಯೆ, ತುರ್ತು ಪರಿಸ್ಥಿತಿ ಘೋಷಣೆ

Update: 2021-07-08 17:20 GMT
photo: twitter/@LaPagina

ಪೋರ್ಟ್ ಒ-ಪ್ರಿನ್ಸ್, ಜು.8: ಹೈಟಿಯ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಮನೆಗೆ ಮಂಗಳವಾರ ತಡರಾತ್ರಿ ನುಗ್ಗಿ ಅಧ್ಯಕ್ಷರನ್ನು ಹತ್ಯೆ ಮಾಡಿದ 4 ಶಂಕಿತರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಸಾಯಿಸಿದ್ದು ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ‌

ಈ ಮಧ್ಯೆ, ಹಂತಕರನ್ನು ಪತ್ತೆಹಚ್ಚಲು ನೆರವಾಗುವ ಉದ್ದೇಶದಿಂದ ದೇಶದಲ್ಲಿ 2 ವಾರ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ಸರಕಾರದ ಮೂಲಗಳು ಹೇಳಿವೆ. ಅಧ್ಯಕ್ಷರನ್ನು ಮನೆಯಲ್ಲಿಯೇ ಹತ್ಯೆ ಮಾಡಿದ ಬಾಡಿಗೆ ಹಂತಕರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದರೂ ಭದ್ರತಾ ಪಡೆಗಳು ಅವರ ಬೆನ್ನಟ್ಟಿವೆ. ಈ ಹಂತದಲ್ಲಿ ನಡೆದ ಸುದೀರ್ಘ ಗುಂಡಿನ ಚಕಮಕಿಯಲ್ಲಿ 4 ಬಾಡಿಗೆ ಹಂತಕರು ಹತರಾಗಿದ್ದು ಇಬ್ಬರನ್ನು ಸೆರೆಹಿಡಿಯಲಾಗಿದೆ ಎಂದು ಹೈಟಿಯ ಪೊಲೀಸ್ ಮಹಾನಿರ್ದೇಶಕ ಲಿಯೋನ್ ಚಾರ್ಲ್ಸ್ ಮಾಹಿತಿ ನೀಡಿದ್ದಾರೆ.
 
ಅಧ್ಯಕ್ಷರನ್ನು ಹತ್ಯೆ ಮಾಡಿದ ಸಶಸ್ತ್ರಧಾರಿ ದುಷ್ಕರ್ಮಿಗಳು ತರಬೇತಿ ಪಡೆದ ವಿದೇಶಿ ಬಾಡಿಗೆ ಹಂತಕರಾಗಿದ್ದು ಅಮೆರಿಕದ ಮಾದಕವಸ್ತು ನಿಯಂತ್ರಣ ವಿಭಾಗದ ಅಧಿಕಾರಿಗಳಂತೆ ನಟಿಸಿ ಬಿಗಿಭದ್ರತೆಯ ಅಧ್ಯಕ್ಷರ ನಿವಾಸ ಪ್ರವೇಶಿಸಿದ್ದರು ಎಂದು ವಿಶ್ವಸಂಸ್ಥೆಯಲ್ಲಿ ಹೈಟಿಯ ರಾಯಭಾರಿ ಬೊಷಿಟ್ ಎಡ್ಮಂಡ್ ಹೇಳಿದ್ದಾರೆ. 

ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಅಧ್ಯಕ್ಷರ ಪತ್ನಿ ಮಾರ್ಟಿನ್ ಆರೋಗ್ಯಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಿಯಾಮಿಗೆ ಸ್ಥಳಾಂತರಿಸಲಾಗಿದೆ. ಮಾದಕವಸ್ತು ಕುರಿತ ಪ್ರಕರಣಗಳನ್ನು ನಿರ್ವಹಿಸಲು ಹೈಟಿಗೆ ನೆರವಾಗಲು ಅಲ್ಲಿ ಅಮೆರಿಕಾದ ಮಾದಕವಸ್ತು ನಿಯಂತ್ರಣ ವಿಭಾಗದ ಶಾಖೆಯಿದೆ. ಹಂತಕರು ಇಂಗ್ಲಿಷ್ ಮತ್ತು ಸ್ಪೇನ್ ಭಾಷೆ ಮಾತನಾಡುತ್ತಿದ್ದರು ಎಂದು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಜೋಸೆಫ್ ಕ್ಲಾಡ್ ಹೇಳಿದ್ದಾರೆ. 

ಜನತೆ ಶಾಂತಿ ಕಾಪಾಡಿಕೊಳ್ಳಬೇಕು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಬರ್ಬರ ಹತ್ಯೆಗೆ ಕಾರಣವಾದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದವರು ಘೋಷಿಸಿದ್ದಾರೆ. ಅಧ್ಯಕ್ಷರ ಹತ್ಯೆ ಪ್ರಕರಣದ ಬಗ್ಗೆ ಅಂತರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು. ದೇಶದಲ್ಲಿ ಈ ವರ್ಷಾಂತ್ಯ ನಡೆಯುವ ಚುನಾವಣೆ ನಿಗದಿತ ವೇಳಾಪಟ್ಟಿಯಲ್ಲೇ ನಡೆಯಲಿದೆ ಎಂದು ಇದಕ್ಕೂ ಮುನ್ನ ಸುದ್ಧಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿದ್ದರು. 

ಸತತ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಹೈಟಿಯಲ್ಲಿ ಅಧ್ಯಕ್ಷರ ಬರ್ಬರ ಹತ್ಯೆ ಪ್ರಕರಣ ಮತ್ತಷ್ಟು ಗೊಂದಲಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹೈಟಿಯಲ್ಲಿ 2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಮೊಯಿಸ್ ಅಧಿಕಾರಾವಧಿ ಮುಕ್ತಾಯಗೊಳ್ಳುವ ಅವಧಿ ಬಗ್ಗೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ, ನ್ಯಾಯಾಲಯದ ಆದೇಶದಂತೆ ಮೊಯಿಸ್ ಅವರೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು. ಆದರೆ ಮೊಯಿಸ್ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದಾಹ, ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದ್ದು ಮತ್ತಿತರ ಆರೋಪಗಳಿದ್ದು 2017ರ ಬಳಿಕ ಅವರ ವಿರುದ್ಧ ದೇಶದಲ್ಲಿ ನಿರಂತರ ಪ್ರತಿಭಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News