×
Ad

ಕೇಂದ್ರ ಸಚಿವರ ಪತ್ನಿ, ಮಾಜಿ ಅಧಿಕಾರಿಯ ಆಸ್ತಿ ಕುರಿತಂತೆ ಟ್ವೀಟ್ ಮಾಡಿದ ಸಾಕೇತ್ ಗೋಖಲೆಗೆ ದಿಲ್ಲಿ ಹೈಕೋರ್ಟ್ ತರಾಟೆ

Update: 2021-07-09 16:02 IST

ಹೊಸದಿಲ್ಲಿ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ, ಮಾಜಿ ಅಧಿಕಾರಿ ಲಕ್ಷ್ಮಿಪುರಿ ಅವರ ಕುರಿತಂತೆ  ಮಾಡಲಾಗಿದೆಯೆನ್ನಲಾದ  ಮಾನಹಾನಿಕರ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ಆರ್‍ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರನ್ನು ದಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಗೋಖಲೆ ಅವರು ಮಾಡಿದ ಟ್ವೀಟ್‍ಗಳನ್ನು ಡಿಲೀಟ್ ಮಾಡುವಂತೆ ಹಾಗೂ ರೂ 5 ಕೋಟಿ ಪರಿಹಾರ ನೀಡುವಂತೆ ಕೋರಿ ಲಕ್ಷ್ಮಿ ಅವರು ಸಲ್ಲಿಸಿರುವ ಅಪೀಲಿನ ಮೇಲಿನ ತೀರ್ಪನ್ನು ನ್ಯಾಯಾಲಯ  ಜುಲೈ 13ಕ್ಕೆ ಕಾದಿರಿಸಿದೆ. ಆದರೆ ತಾವು ಮಾಡಿದ ಟ್ವೀಟ್‍ಗಳನ್ನು ಡಿಲೀಟ್ ಮಾಡಲು ಗೋಖಲೆ ನಿರಾಕರಿಸಿದ್ದಾರೆ.

ಲಕ್ಷ್ಮಿ ಅವರು ಸ್ವಿಝಲ್ರ್ಯಾಂಡ್ ನಲ್ಲಿ ಖರೀದಿಸಿದ ಆಸ್ತಿ ಕುರಿತಂತೆ ಪ್ರಶ್ನೆಗಳನ್ನೆತ್ತಿ ಹಾಗೂ ಪುರಿ ದಂಪತಿಯ ಆಸ್ತಿಗಳ ಕುರಿತಂತೆ ಹಲವು ಶಂಕೆಗಳನ್ನು ವ್ಯಕ್ತಪಡಿಸಿ ಸಾಕೇತ್ ಗೋಖಲೆ ಜೂನ್ 13 ಹಾಗೂ 26ರಂದು ಟ್ವೀಟ್ ಮಾಡಿದ್ದರು.

ಗೋಖಲೆ ಅವರ ಪ್ರಕಾರ ಲಕ್ಷ್ಮಿ ಅವರ ಸಂಪತ್ತು ಅವರ ಪತಿ ಹರ್ದೀಪ್ ಸಿಂಗ್ ಪುರಿ ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ಘೋಷಿಸಿರುವ ಅವರ ಸಂಪತ್ತಿಗಿಂತಲೂ ಹೆಚ್ಚಾಗಿದೆ. ತಮ್ಮ ಟ್ವೀಟ್‍ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಟ್ಯಾಗ್ ಮಾಡಿದ್ದ ಗೋಖಲೆ ಈ ಕುರಿತಂತೆ ಜಾರಿ ನಿರ್ದೇಶನಾಲಯದ ತನಿಖೆಗೆ ಕೋರಿದ್ದರು.

"ನೀವು ಈ ರೀತಿ ಜನರನ್ನು ಹೇಗೆ ತಪ್ಪಾಗಿ ಬಿಂಬಿಸಬಹುದು? ಅವುಗಳನ್ನು ವೆಬ್ ಸೈಟ್‍ನಿಂದ ತೆಗೆದು ಹಾಕಿ, ಅವರ ಕುರಿತು ನಿಮಗೇನಾದರೂ ಸಮಸ್ಯೆಯಿದ್ದರೆ ಮೊದಲು ಅವರ ಬಳಿ ಹೋಗಿದ್ದೀರೇ?" ಎಂದು ವಿಚಾರಣೆ ವೇಳೆ ಜಸ್ಟಿಸ್ ಸಿ ಹರಿ ಶಂಕರ್ ಹೇಳಿದರು.

ಗೋಖಲೆ ಅವರು  ತಮ್ಮ ಟ್ವೀಟ್‍ಗಳಲ್ಲಿ ಸತ್ಯವನ್ನು ತಿರುಚಿದ್ದಾರೆ ಎಂದು ಅಮೆರಿಕಾದಲ್ಲಿ  ಈ ಹಿಂದೆ ಸಹಾಯಕ ಮಹಾಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಿ ಅವರು ತಮ್ಮ ಅಪೀಲಿನಲ್ಲಿ ಆರೋಪಿಸಿದ್ದರು.

ಈ ಕುರಿತು ತಮ್ಮ ಟ್ವಿಟರ್‌ ನಲ್ಲಿ ಪ್ರತಿಕ್ರಿಯಿಸಿದ ಸಾಕೇತ್‌ ಗೋಖಲೆ, "ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂದರ್ಭದಲ್ಲಿ ಇದು ಬಹಳ ಮುಖ್ಯವಾಗಿದೆ. ತನಿಖಾ ವರದಿ ಪ್ರಕಟಿಸುವ ಮೊದಲು ಪತ್ರಕರ್ತ ಅಧಿಕಾರಿಗಳನ್ನು ಸಂಪರ್ಕಿಸುವ ಅಗತ್ಯವಿದೆಯೇ?"

ನನಗೆ ನಿನ್ನೆಯಷ್ಟೇ ೪೨೯ ಪುಟದ ವಾದದ ಪ್ರತಿಯನ್ನು ನೀಡಲಾಯಿತು. ಅದಕ್ಕೆ ೨೪ ಗಂಟೆಗಳಲ್ಲಿ ಪ್ರತ್ಯುತ್ತರ ನೀಡಲು ಸಾಧ್ಯವೇ? ಕೇಂದ್ರ ಸಚಿವರ ಅಫಿಡವಿಟ್ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಕೇಳುವ ಮತ್ತು ಪ್ರಕಟಿಸುವ ಮೊದಲು ಯಾವ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಖಚಿತವಾಗಿಲ್ಲ. ವಾದಕ್ಕೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ನನಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ನಾನು ಟ್ವೀಟ್‌ ಸ್ವ ಇಚ್ಛೆಯಿಂದ ಡಿಲೀಟ್‌ ಮಾಡುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News