×
Ad

ಮಗುವಿಗಾಗಿ ಆಮದುಗೈಯುತ್ತಿರುವ 18 ಕೋಟಿ ರೂ. ಮೌಲ್ಯದ ಔಷಧಿಗೆ ತೆರಿಗೆ ಮನ್ನಾಗೊಳಿಸುವಂತೆ ಪ್ರಧಾನಿಗೆ ಕೇರಳ ಸಿಎಂ ಮನವಿ

Update: 2021-07-09 16:33 IST
Photo: keralakaumudy

ತಿರುವನಂತಪುರಂ: ಅತ್ಯಂತ ವಿರಳ ಸ್ಪೈನಲ್ ಮಸ್ಕ್ಯುಲರ್ ಎಟ್ರೊಫಿ ಸಮಸ್ಯೆಯಿಂದ ಬಳಲುತ್ತಿರುವ ಕಣ್ಣೂರಿನ 18 ತಿಂಗಳ ಮಗು ಮುಹಮ್ಮದ್ ಚಿಕಿತ್ಸೆಗಾಗಿ ಆಮದುಗೊಳಿಸಲಾಗುವ ಜೀವರಕ್ಷಕ ಔಷಧಿಗೆ ಕಸ್ಟಮ್ಸ್ ಸುಂಕ  ಹಾಗೂ ಜಿಎಸ್‍ಟಿಯಿಂದ ವಿನಾಯಿತಿ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

"ಈ ಆರೋಗ್ಯ ಸಮಸ್ಯೆಗೆ ಅಗತ್ಯವಿರುವ ಔಷಧಿ ಭಾರೀ ದುಬಾರಿಯಾಗಿದ್ದು ಮಗುವಿನ ಹೆತ್ತವರಿಗೆ ಅದನ್ನು ಭರಿಸುವುದು ಅಸಾಧ್ಯ. ರೂ 18 ಕೋಟಿ ವೆಚ್ಚದ ಔಷಧಿಯನ್ನು ದಾನಿಗಳ ಸಹಾಯದಿಂದ ಅಮೆರಿಕಾದಿಂದ ಆಮದುಗೊಳಿಸುವ ಉದ್ದೇಶವಿದೆ. ಇಂತಹುದೇ ಪ್ರಕರಣದಲ್ಲಿ ಮುಂಬೈ ಮಗುವಿಗೆ ಅಗತ್ಯವಿದ್ದ ಔಷಧಿಯ ಮೇಲಿನ ತೆರಿಗೆಯನ್ನು ಕೇಂದ್ರ ಮನ್ನಾಗೊಳಿಸಿದೆ ಎಂದು ತಿಳಿದು ಬಂದಿದೆ.  ಈ ಕೇರಳದ ಮಗುವಿನ ಔಷಧಿ ಝೊಲ್ಗೆನ್ಸ್‍ಮಾ ಆಮದುಗೊಳಿಸುವಾಗ ಕಸ್ಟಮ್ಸ್ ಸುಂಕ ಹಾಗೂ ಇಂಟಗ್ರೇಟೆಡ್ ಜಿಎಸ್‍ಟಿ ವಿಧಿಸದಂತೆ  ಕೇಂದ್ರ ವಿತ್ತ ಸಚಿವಾಲಯಕ್ಕೆ ಸೂಚನೆ ನೀಡಿ" ಎಂದು ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಇಂತಹುದೇ ಸಮಸ್ಯೆ ಎದುರಿಸುತ್ತಿರುವ ಮಗು ಮುಹಮ್ಮದ್‍ನ 15 ವರ್ಷದ ಸೋದರಿ, ಅರ್ಫಾ ತನ್ನ ತಮ್ಮನ ಕುರಿತು  ವೀಡಿಯೋ ಮೂಲಕ ವಿವರಿಸಿ ಸಹಾಯ ಕೋರಿದಾಗ ರಾಜ್ಯದ ಜನರು ಪ್ರಮುಖವಾಗಿ ವಲಸಿಗರು ದಾಖಲೆಯೆಂಬಂತೆ ರೂ 18 ಕೋಟಿಯನ್ನು ಏಳು ದಿನಗಳಲ್ಲಿ ದೇಣಿಗೆ ಮಾಡಿದ್ದರು.

ಮಗುವಿಗೆ ಅಗತ್ಯವಿರುವ ಔಷಧಿಗೆ ಕಸ್ಟಮ್ಸ್ ಸುಂಕ ಹಾಗೂ ಜಿಎಸ್‍ಟಿ ಸುಮಾರು ರೂ 6.5 ಆಗಲಿದೆಯೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News