×
Ad

ಬೈಕಂಪಾಡಿಯಲ್ಲಿ ಎಪಿಎಂಸಿಯಲ್ಲಿ ನೂತನ ಸಗಟು ಮಾರುಕಟ್ಟೆ: ಜು. 14ರಂದು ಶಿಲಾನ್ಯಾಸ

Update: 2021-07-09 16:37 IST
ಕೃಷ್ಣರಾಜ ಹೆಗ್ಡೆ 

ಮಂಗಳೂರು, ಜು. 9: ಬೈಕಂಪಾಡಿಯ ಎಪಿಎಂಸಿಯಲ್ಲಿ ಹಣ್ಣು, ತರಕಾರಿ ಸಗಟು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಆಧುನಿಕ ಸಗಟು ಮಾರುಕಟ್ಟೆ ನಿರ್ಮಾಣವಾಗಲಿದ್ದು, ಜು. 14ರಂದು ಶಿಲಾನ್ಯಾಸ ನೆರವೇರಲಿದೆ.

ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ಹಣ್ಣು ತರಕಾರಿ ಸಗಟು ವ್ಯಾಪಾರವನ್ನು 2020ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಎಪಿಎಂಸಿಯಲ್ಲಿ ನಿರ್ಮಾಣವಾಗಿದ್ದ ಮಾರುಕಟ್ಟೆಯಲ್ಲಿ ಸಾಕಷ್ಟು ಮೂಲಭೂತ ವ್ಯವಸ್ಥೆಯ ಕೊರತೆ ಬಗ್ಗೆ ವ್ಯಾಪಾರಸ್ಥರಿಂದ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಸಭೆಯಲ್ಲಿ ಎಪಿಎಂಸಿ ವತಿಯಿಂದ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿತ್ತು. ಅದರಂತೆ 2 ತಿಂಗಳ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಅನುಮತಿ ದೊರಕಿದೆ ಎಂದು ಎಪಿಸಿಎಂ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.

ಬೈಕಂಪಾಡಿ ಎಪಿಎಂಸಿಯು 81 ಎಕರೆ ಜಾಗವನ್ನು ಹೊಂದಿದ್ದು, ಇದರಲ್ಲಿ ಈಗಾಗಲೇ ಒಂದು ಬದಿಯಲ್ಲಿ ಸುಮಾರು 300 ಗೋದಾಮುಗಳಿವೆ. ಪ್ರಸಕ್ತ ಅಲ್ಲಿ 216 ಮಂದಿ ಸಗಟು ವ್ಯಾಪಾರಿಗಳು ತಮ್ಮ ವ್ಯವಹಾರ ನಡೆಸುತ್ತಿದ್ದಾರೆ.

ಹೇಗಿರಲಿದೆ ನೂತನ ಮಾರುಕಟ್ಟೆ

ನೆಲ ಮಹಡಿಯಲ್ಲಿ ತರಕಾರಿ, ಹಣ್ಣುಗಳನ್ನು ಅನ್‌ಲೋಡ್ ಮತ್ತು ಲೋಡ್ ಮಾಡಲು ಸೂಕ್ತ ವ್ಯವಸ್ಥೆ ಹಾಗೂ ಮೇಲ್ಗಡೆ ಕಚೇರಿ ವ್ಯವಸ್ಥೆ. ಎ ಮತ್ತು ಬಿ ಎಂಬ 2 ಬ್ಲಾಕ್‌ಗಳನ್ನು ಹೊಂದಿದ್ದು ಸುಮಾರು 100 ಮಳಿಗೆಗಳು ಇರಲಿವೆ. ಹಣ್ಣು ಮತ್ತು ತರಕಾರಿ ಕೆಡದಂತೆ ಸುರಕ್ಷಿತವಾಗಿ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ತೆ ಇರಲಿದೆ.

ಸಮರ್ಪಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ರೂಫ್ ಟಾಪ್‌ನಲ್ಲಿ ಸೌರ ವಿದ್ಯುತ್ ಪ್ಯಾನಲ್ ಅಳವಡಿಕೆ. ವಾಹನ ಸಂಚಾರಕ್ಕೆ 80 ಅಡಿ ಅಗಲದ ರಸ್ತೆ, ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ. 110 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ, ಮಳೆ ನೀರು ಕೊಯ್ಲು ವ್ಯವಸ್ಥೆ.

''ಬೈಕಂಪಾಡಿ ಎಪಿಎಂಸಿಯ 3.75 ಎಕರೆ ಪ್ರದೇಶದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಒಂದು ವರ್ಷದೊಳಗೆ ಈ ನೂತನ ಮಾರುಕಟ್ಟೆ ತಲೆ ಎತ್ತಲಿದೆ. ಜು. 14ರಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಭೂಮಿಪೂಜೆ ನಡೆಯಲಿದೆ. ಒಂದು ವರ್ಷದೊಳಗೆ ಮಾರುಕಟ್ಟೆ ನಿರ್ಮಾಣವಾಗಲಿದೆ. ಎಪಿಎಂಸಿಗೆ ಸರಕಾರದಿಂದ ಅನುದಾನ ಲಭಿಸುವುದಿಲ್ಲ. ನಿರ್ವಹಣೆ, ನಿಯಂತ್ರಣ, ಅಭಿವೃದ್ಧಿ ಸಹಿತ ಎಲ್ಲ ಚಟುವಟಿಕೆಗಳನ್ನು ಎಪಿಎಂಸಿಯ ಸ್ವಯಂ ಹಣಕಾಸಿನಿಂದ ನಿರ್ವಹಿಸಲಾಗುತ್ತಿದೆ. ಪ್ರಸಕ್ತ ಹೊಸ ಮಾರುಕಟ್ಟೆಯನ್ನು ಎಪಿಎಂಸಿ ತನ್ನ ಸ್ವಂತ ನಿಧಿಯನ್ನು ಬಳಸಿ ನಿರ್ಮಾಣ ಮಾಡಲಿದೆ''

- ಕೃಷ್ಣರಾಜ ಹೆಗ್ಡೆ, ಅಧ್ಯಕ್ಷರು, ಎಪಿಎಂಸಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News