ಕಾರ್ಕಳ; ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಎಸ್‌ಐ ಅಮಾನತಿಗೆ ಕಾಂಗ್ರೆಸ್ ಆಗ್ರಹ
ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಕಾರ್ಕಳ ನಗರ ಠಾಣೆ ಎಸ್‌ಐ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಕಾರ್ಕಳದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ ಅಧಿಕಾರಿಗಳು ಬಿಜೆಪಿ ಪಕ್ಷದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ, ನ್ಯಾಯಯುತವಾಗಿ ಕಾರ್ಯನಿರ್ವಸಬೇಕು ತಪ್ಪಿದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕಾಗಬಹುದು ಎಂದರು.
ಕಾರ್ಕಳ ಯುವ ಕಾಂಗ್ರೇಸ್ ಅಧ್ಯಕ್ಷ ಯೋಗಿಶ್ ಇನ್ನಾ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಹಿರ್ಗಾನರವರ ಮೇಲೆ ಸುಳ್ಳು ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಮಾಡಿರುವುದು ಖಂಡನೀಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ದೌರ್ಜನ್ಯ ಮಾಡಿರುವ ಠಾಣಾಧಿಕಾರಿಯನ್ನು ವಜಾ ಮಾಡಬೇಕು, ಅಲ್ಲದೆ ರಾಧಾಕೃಷ್ಣ ನಾಯಕ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ತೇಜೋವಧೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ತನ್ನ ಹೇಸರಿನಲ್ಲಿ ನಕಲಿ ಖಾತೆ ತೆರೆದ ಬಗ್ಗೆ ರಾಧಾಕೃಷ್ಣ ನಾಯಕ್ ಬೆಂಗಳೂರಿನ ಗಂಗಮನ ಗುಡಿ ಠಾಣೆಯಲ್ಲಿ ಸೆಪ್ಟೆಂಬರ್ ನಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ಬಗ್ಗೆ ಈ ವರೆಗೆ ಕ್ರಮ ಆಗಿಲ್ಲ ಎಂದು ಹೇಳಿದರು.
ರಾಧಾಕೃಷ್ಣ ನಾಯಕ್ ತಪ್ಪು ಮಾಡಿದ್ದರೆ ಸಂವಿಧಾನ ಪ್ರಕಾರ ಕಾನೂನು ಕ್ರಮ ಕೈಗೊಳ್ಳವ ಬದಲು ಹೃದಯ ರೋಗಿಯಾಗಿರುವ ರಾಧಾಕೃಷ್ಣ ನಾಯಕ್‌ರ ಎದೆಗೆ ಒದ್ದು ಹಲ್ಲೆ ಮಾಡಿರುವುದು ಬಿಜೆಪಿಯವರನ್ನು ಮೆಚ್ಚಿಸುವ ಕಾರ್ಯವೇ ಎಂದು ಪ್ರಶ್ನಿಸಿದ್ದಾರೆ.
ತುಳು ಸಂಸ್ಕೃತಿಯ ಪಾಠ ಬಿಜೆಪಿಯಿಂದ ಕಲಿಯಬೇಕಿಲ್ಲ
ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಿಲ್ಲಾ ಭೇಟಿ ಸಂದರ್ಭ ನೀಡಿರುವ ಉಡುಗೋರೆಯ ಮೇಲೆ ಬಿಜೆಪಿಯವರು ತುಳುನಾಡಿನ ಸಂಸ್ಕೃತಿಗೆ ಅವಮಾನ ಅಂತ ಬಿಂಬಿಸುತ್ತಿರುವುದು ರಾಜಕೀಯ ಪ್ರೇರಿತ. ಇದು ಕೇವಲ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿಯವರ ಗಿಮಿಕ್ ಆಗಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಕಾಂಗ್ರೆಸ್ ಮುಖಂಡರಿಗೆ ಉಡುಗೊರೆ ನೀಡುವ ಸಂದರ್ಭ ಬಿಜೆಪಿಯವರಿಗೆ ಧಾರ್ಮಿಕ ಸೂಕ್ಷಮತೆ ಕಂಡು ಬರುವುದು ಹೊಸತೇನಲ್ಲ, ಬಿಜೆಪಿಯವರು ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೋಮು ಗಲಭೆ ಸೃಷ್ಟಿ ಮಾಡಿ ರಾಜಕೀಯ ಮಾಡುವುದಾಗಿದೆ ಎಂದರು.
ತುಳು ನಾಡಿಗೆ ಚಿಕಮಗಳೂರಿನಿಂದ ವಲಸೆ ಬಂದ ಶಾಸಕ ಸುನಿಲ್ ಕುಮಾರ್‌ಗೆ ತುಳು ಸಂಸ್ಕೃತಿಯ ಮೇಲೆ ನಂಬಿಕೆ ಇಲ್ಲದೆ ಇರಬಹುದು, ತುಳು ನಾಡನ್ನು ಮಾತೃಭೂಮಿಯಾಗಿ ಆರಾಧಿಸುವ ಕಾಂಗ್ರೆಸ್ ಕಾರ್ಯಕರ್ತರು ತುಳು ಸಂಸ್ಕೃತಿಯ ಪಾಠ ಬಿಜೆಪಿಯವರಿಂದ ಕಲಿಯಬೇಕಿಲ ಎಂದರು.
ತುಳು ಸಂಸ್ಕೃತಿಯ ಬಗ್ಗೆ ಈಗ ಮಾತನಾಡುವ ಬಿಜೆಪಿಯವರು ಲಾಕ್‌ಡೌನ್ ಸಂದರ್ಭ ತುಳುನಾಡಿನ ಜನ ದೇಶ, ವಿದೇಶಗಳಲ್ಲಿ ಸಮಸ್ಯೆಗೆ ಸಿಲುಕಿದಾಗ ಎಷ್ಟು ಸ್ಪಂದಿಸಿದ್ದಾರೆ ಎಂದು ಪ್ರಶ್ನಿಸಿದರು.
ಈ ಸಂದರ್ಭ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಯುವ ಕಾಂಗ್ರೇಸ್ ಮುಖಂಡ ರವಿಶಂಕರ್ ಸೇರಿಗಾರ್, ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರ್ವಾಶೆ, ಪ್ರಭಾಕರ್ ಬಂಗೇರ ಉಪಸ್ಥಿತರಿದ್ದರು.
ಶುಭದ್ ರಾವ್ ಸ್ವಾಗತಿಸಿ, ವಂದಿಸಿದರು.