ಲೋಕಸಭಾ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಚಿರಾಗ್ ಪಾಸ್ವಾನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
Update: 2021-07-09 18:31 IST
ಹೊಸದಿಲ್ಲಿ: ಪಶುಪತಿ ಪರಾಸ್ ಅವರನ್ನು ಸದನದ ಪಕ್ಷದ ನಾಯಕರಾಗಿ ಗುರುತಿಸಿರುವ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದ ಚಿರಾಗ್ ಪಾಸ್ವಾನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
"ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂಬುದನ್ನು ನಾನು ಕಂಡುಕೊಂಡೆ" ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಹೇಳಿದರು.
ಲೋಕಸಭೆಯಲ್ಲಿ ಪರಾಸ್ ಅವರು ಲೋಕಜನಶಕ್ತಿ ಪಕ್ಷದ ನಾಯಕ ಎಂದು ತೋರಿಸುವ ಸ್ಪೀಕರ್ ಅವರು ಜೂ.14ರಂದು ಹೊರಡಿಸಿರುವ ಸುತ್ತೋಲೆಯನ್ನು ಬದಿಗಿರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಲೋಕಸಭೆಯಲ್ಲಿ ನಾಯಕನ ಬದಲಾವಣೆ ನಿರ್ದಿಷ್ಟ ಪಕ್ಷದ ಹಕ್ಕು ಹಾಗೂ ಪ್ರಸ್ತುತ ಸಂದರ್ಭದಲ್ಲಿ ಅರ್ಜಿದಾರರ ಸಂವಿಧಾನದ 26 ನೇ ವಿಧಿ 2 (ಪಕ್ಷ) ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಯಾರು ನಾಯಕ, ಮುಖ್ಯ ಸಚೇತಕ ಇತ್ಯಾದಿ ಎನ್ನುವುದನ್ನು ಕೇಂದ್ರ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.