ಕಾರ್ಕಳ ಎಸ್ಸೈಯನ್ನು ಕೂಡಲೇ ಅಮಾನತುಗೊಳಿಸಿ: ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ, ಜು.9: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಾರ್ಕಳ ಹಿರ್ಗಾನದ ರಾಧಾಕೃಷ್ಣ ನಾಯಕ್ ಎಂಬವರನ್ನು ಒಂದು ವಷರ್ದ ಹಿಂದಿನ ಸುಳ್ಳು ಕೇಸನ್ನೇ ಕಾರಣವಾಗಿಸಿಕೊಂಡು, ಠಾಣೆಗೆ ಕರೆಸಿ ಅಮಾನುಷ ರೀತಿಯಲ್ಲಿ ಗಂಭೀರ ಹಲ್ಲೆ ನಡೆಸಿರುವ ಕಾರ್ಕಳ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರ ವರ್ತನೆ ಖಂಡನೀಯವಾಗಿದ್ದು, ಅವರನ್ನು ಕೂಡಲೆ ಅಮಾನತುಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಒಂದು ವಷರ್ದ ಹಿಂದೆ ರಾಧಾಕೃಷ್ಣ ನಾಯಕ್‌ರ ಹೆಸರಲ್ಲಿ ಫೇಸ್‌ಬುಕ್ಕಿನಲ್ಲಿ ನಕಲಿ ಖಾತೆ ಸ್ಠೃಷ್ಟಿ ಮಾಡಿ ದೇಶದ ಸೈನಿಕರ ಬಗ್ಗೆ ಅವಹೇಳನಕಾರಿ ಬರಹ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಬಗ್ಗೆ ಅವರು ಸಂಬಂಧ ಪಟ್ಟ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಕಾರ್ಕಳ ನಗರ ಠಾಣಾಧಿಕಾರಿ ನಕಲಿ ಖಾತೆ ಸೃಷ್ಟಿಸಿ ಸೈನಿಕರಿಗೆ ಅವಹೇಳನ ಮಾಡಿದವರನ್ನು ಹುಡುಕಿ ಶಿಕ್ಷಿಸದೆ ದೂರುದಾರನನ್ನೇ ಠಾಣೆಗೆ ಕರೆಸಿ ಹಲ್ಲೆ ನಡೆಸಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ ಎಂದವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ದೌರ್ಜನ್ಯ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ನಮ್ಮ ಅಮಾಯಕ ಕಾರ್ಯಕರ್ತನಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ಡಿವೈಎಸ್ಪಿ ತನಿಖೆ
ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಾರ್ಕಳ ಪೊಲೀಸರು ನಡೆಸಿರುವ ಹಲ್ಲೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಆದೇಶಿಸಿದ್ದಾರೆ.
ಕಾರ್ಕಳ ನಗರ ಠಾಣೆಯ ಪಿಎಸ್‌ಐ ಅವರ ಮೇಲಿನ ಆರೋಪಗಳ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾನು ಕುಂದಾಪುರ ಡಿವೈಎಸ್ಪಿ ಅವರಿಗೆ ಸೂಚಿಸಿರುವುದಾಗಿ ಎಸ್ಪಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.