ಅಫ್ಘಾನಿಸ್ತಾನದ ಶೇ.85 ಭಾಗ ನಮ್ಮ ನಿಯಂತ್ರಣದಲ್ಲಿ: ತಾಲಿಬಾನ್

Update: 2021-07-09 14:52 GMT

ಮಾಸ್ಕೋ (ರಶ್ಯ), ಜು. 9: ಇರಾನ್ ಜೊತೆಗಿನ ಗಡಿದಾಟು ಸೇರಿದಂತೆ ಅಫ್ಘಾನಿಸ್ತಾನದ 85 ಶೇ. ಭಾಗದ ಮೇಲೆ ನಿಯಂತ್ರಣ ಹೊಂದಿರುವುದಾಗಿ ತಾಲಿಬಾನ್ ಶುಕ್ರವಾರ ಹೇಳಿಕೊಂಡಿದೆ. ಯುದ್ಧಗ್ರಸ್ತ ದೇಶದಿಂದ ಅಮೆರಿಕದ ಸೈನಿಕರ ವಾಪಸಾತಿ ಪೂರ್ಣಗೊಳ್ಳುತ್ತಿರುವಂತೆಯೇ ತಾಲಿಬಾನ್ ಈ ಹೇಳಿಕೆ ನೀಡಿದೆ.

ನಮ್ಮ ಹೋರಾಟಗಾರರು ಗಡಿ ಪಟ್ಟಣ ಇಸ್ಲಾಮ್ ಖಾಲಾವನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಾಲಿಬಾನ್ ಹೇಳಿದೆ. ಇದರೊಂದಿಗೆ ಇರಾನ್ ಜೊತೆಗಿನ ಗಡಿಯಿಂದ ಆರಂಭಿಸಿ ಚೀನಾ ಜೊತೆಗಿನ ಗಡಿವರೆಗಿನ ಭೂಭಾಗವು ಈಗ ನಮ್ಮ ನಿಯಂತ್ರಣದಲ್ಲಿದೆ ಎಂದಿದೆ.

ಅಫ್ಘಾನಿಸ್ತಾನದ 398 ಜಿಲ್ಲೆಗಳ ಪೈಕಿ ಸುಮಾರು 250 ಜಿಲ್ಲೆಗಳ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇವೆ ಎಂಬುದಾಗಿ ಮಾಸ್ಕೋದಲ್ಲಿರುವ ತಾಲಿಬಾನ್ ಅಧಿಕಾರಿಗಳ ನಿಯೋಗವೊಂದು ತಿಳಿಸಿದೆ. ಆದರೆ, ಇದನ್ನು ಅಫ್ಘಾನಿಸ್ತಾನ ಸರಕಾರ ನಿರಾಕರಿಸಿದೆ ಹಾಗೂ ಸ್ವತಂತ್ರವಾಗಿ ಖಚಿತಪಡಿಸಲು ಅಸಾಧ್ಯವಾಗಿದೆ. ಇಸ್ಲಾಮ್ ಖಾಲಾ ಗಡಿದಾಟು ‘‘ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ’’ ಎಂಬುದಾಗಿ ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ. ಆದರೆ, ಅದನ್ನು ಮರುವಶಪಡಿಸಿಕೊಳ್ಳಲು ಹೋರಾಟ ನಡೆಯುತ್ತಿದೆ ಎಂದು ಕಾಬೂಲ್ನಲ್ಲಿ ಅಫ್ಘಾನ್ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘‘ಗಡಿ ಭದ್ರತಾ ಘಟಕಗಳು ಸೇರಿದಂತೆ ಅಫ್ಘಾನಿಸ್ತಾನದ ಎಲ್ಲ ಭದ್ರತಾ ಪಡೆಗಳು ಈಗ ಆ ಪ್ರದೇಶದಲ್ಲಿವೆ ಹಾಗೂ ಗಡಿದಾಟನ್ನು ಮರುವಶಪಡಿಸಿಕೊಳ್ಳಲು ಪ್ರಯತ್ನಗಳು ಸಾಗಿವೆ’’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಖ್ ಅರಿಯಾನ್ ಎಎಫ್ಪಿ ಸುದ್ದಿ ಸಂಸ್ಥಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News