×
Ad

ಮೂರು ತಿಂಗಳಲ್ಲಿ ಖಾಸಗಿ ಬಸ್ ಮಾಲಕರಿಗೆ 400 ಕೋಟಿ ರೂ.ನಷ್ಟ : ಸುರೇಶ್ ನಾಯಕ್ ಕುಯಿಲಾಡಿ

Update: 2021-07-09 21:34 IST

ಉಡುಪಿ, ಜು.9: ಕೊರೋನ ಎರಡನೇ ಅಲೆಯ ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಬಸ್‌ಗಳ ಮಾಲಕರಿಗೆ ಸುಮಾರು 400 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟ ಹೇಳಿದೆ.

ಉಡುಪಿಯಲ್ಲಿ ಶುಕ್ರವಾರ ನಡೆದ ಒಕ್ಕೂಟದ ಪ್ರಥಮ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಉಡುಪಿ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದರು.

ಖಾಸಗಿ ಬಸ್‌ಗಳು ರಾಜ್ಯದ 20 ಜಿಲ್ಲೆಗಳಲ್ಲಿ ಕಾರ್ಯಾಚರಿಸುತಿದ್ದು, ಸುಮಾರು 8000 ಬಸ್‌ಗಳು ಓಡಾಟ ನಡೆಸುತ್ತಿವೆ. ಕೊರೋನದಿಂದಾಗಿ ಕಳೆದ ಮೂರು ತಿಂಗಳಿಂದ ಬಸ್‌ಗಳು ರಸ್ತೆಗಳಿದಿಲ್ಲ. ನಮಗೆ ನಯಾಪೈಸೆ ಆದಾಯ ಇಲ್ಲದೇ ಹೋದರೂ ತೆರಿಗೆಯನ್ನು ನೀಡಬೇಕಾಗಿದೆ. ಆದುದರಿಂದ ಆರು ತಿಂಗಳ ಕಾಲ ತೆರಿಗೆಯಿಂದ ತಮಗೆ ವಿನಾಯಿತಿ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡುತಿದ್ದೇವೆ ಎಂದವರು ತಿಳಿಸಿದರು.

ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ವಿವಿಧ ಸಂಘಗಳು ಸಹ ಪ್ರತ್ಯೇಕವಾಗಿ ಮನವಿ ಅರ್ಪಿಸಿ ಒತ್ತಾಯಿಸಿದೆ. ಆದರೆ ಸರಕಾರ ಕೇವಲ ಆಶ್ವಾಸನೆ ನೀಡುತ್ತಿವೆಯೇ ಹೊರತು ಅದನ್ನು ಜಾರಿಗೆ ತರುತ್ತಿಲ್ಲ ಎಂದು ಸುರೇಶ್ ನಾಯಕ್ ಹೇಳಿದರು.

ಕೊರೋನ ಸಂದರ್ಭದಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಸಾರಿಗೆ ವ್ಯವಸ್ಥೆ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿವೆ. 2020ರಲ್ಲಿ ಸರಕಾರಕ್ಕೆ ಸರಂಡರ್ ಮಾಡಿದ ಎಷ್ಟೋ ಬಸ್‌ಗಳು ಇನ್ನೂ ರಸ್ತೆಗೆ ಬಂದಿಲ್ಲ. ಕೆಎಸ್ಸಾರ್ಟಿಸಿಗೆ ಕಳೆದ ಸಾಲಿನಲ್ಲಿ 2380 ಕೋಟಿ ರೂ.ಸಹಾಯಧನ ನೀಡಿದ ಸರಕಾರ, ಇದರಿಂದ ಅದು ಕಡಿಮೆ ದರದಲ್ಲಿ ಬಸ್ ಓಡಿಸಲು ಸಹಾಯ ಮಾಡುತ್ತಿದೆ ಎಂದವರು ದೂರಿದರು.

ಸರಕಾರದಿಂದ ಖಾಸಗಿ ಬಸ್ ಮಾಲಕರು ಬೇರೆ ಯಾವುದೇ ಸಹಾಯ ಕೇಳುತ್ತಿಲ್ಲ. ಈ ಸಂಕಷ್ಟ ಕಾಲದಲ್ಲಿ ನಮಗೂ ಆರು ತಿಂಗಳ ಕಾಲ ತೆರಿಗೆಯಲ್ಲಿ ವಿನಾಯಿತಿ ನೀಡಿ ನಮಗೂ ಬದುಕಲು ಅವಕಾಶಮಾಡಿಕೊಡಿ. ಕೆಎಸ್ಸಾರ್ಟಿಸಿ ಪ್ರಯಾಣಿಕರಿಗೆ ನೀಡುತ್ತಿರುವ ಎಲ್ಲಾ ವಿನಾಯಿತಿ, ರಿಯಾಯಿತಿಗಳನ್ನು ನಾವೂ ನೀಡುತ್ತೇವೆ. ನಾವು ನಮ್ಮ ಕೈಯಿಂದ ಇವುಗಳನ್ನು ಭರಿಸುತಿದ್ದೇವೆ ಎಂದು ಸುರೇಶ್ ನಾಯಕ್ ವಿವರಿಸಿದರು.

ಸರಕಾರದ ಇದೇ ಧೋರಣೆ ಮುಂದುವರಿದರೆ ರಾಜ್ಯದಲ್ಲಿ ಖಾಸಗಿ ಸಾರಿಗೆ ಉದ್ಯಮ ಶಾಶ್ವತವಾಗಿ ಕೊನೆಗೊಳ್ಳುವ ಸೂಚನೆ ಕಂಡುಬರುತ್ತಿದೆ. ನಮ್ಮನ್ನು ಎರಡನೇ ದರ್ಜೆಯವರನ್ನಾಗಿ ನೋಡಬೇಡಿ ಎಂಬುದು ಸರಕಾರಕ್ಕೆ ನಮ್ಮ ಮನವಿಯಾಗಿದೆ. ನಮಗೆ ನೀಡುವ ಆರು ತಿಂಗಳ ವಿನಾಯಿತಿಯಿಂದ ನಮಗೆ ಕೇವಲ 80 ಕೋಟಿ ರೂ. ಲಾಭವಾಗುತ್ತದೆ ಎಂದು ಕುಯಿಲಾಡಿ ತಿಳಿಸಿದರು.

ಕಾಯಕಲ್ಪ ನೀಡಿ: ಕೆಎಸ್ಸಾರ್ಟಿಸಿಯಂತೆ ನಾವು ಸಹ ಜನರ ಸೇವೆ ಮಾಡುತಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಗೆ ಕಾಯಕಲ್ಪ ನೀಡಿ ಎಂದು ಮನವಿ ಮಾಡಿದ ಕುಯಿಲಾಡಿ, ಎಲ್ಲಾ ಜಿಲ್ಲೆಗಳ ಖಾಸಗಿ ಸಾರಿಗೆ ವ್ಯವಸ್ಥೆ ಸಂಕಷ್ಟದಲ್ಲಿದೆ. ಇದೀಗ ಒಕ್ಕೂಟದ ಅಧ್ಯಕ್ಷನಾಗಿ ನಾನು ಎಲ್ಲಾ 20 ಜಿಲ್ಲೆಗಳಿಗೆ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಯನ್ನು ಅರಿತುಕೊಳ್ಳಲಿದ್ದೇನೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಸಾರಿಗೆ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೊಳಿಸುವಂತೆ ಒಕ್ಕೂಟದ ಪರವಾಗಿ ಮನವಿ ಮಾಡಿದ ಅವರು, ಇದರಿಂದ ಈಗ ಕೆಎಸ್ಸಾರ್ಟಿಸಿ ಬಸ್‌ಗಳು ಓಡುವ ಮಾರ್ಗಗಳಲ್ಲೂ ಖಾಸಗಿ ಬಸ್ ಓಡಲು ಅವಕಾಶವಾಗಲಿದೆ. ಇದರೊಂದಿಗೆ ರಾಜ್ಯಾದ್ಯಂತ ಫ್ಲೆಕ್ಸಿ ಫೇರ್‌ನ್ನು ಜಾರಿಗೆ ತನ್ನಿ ಎಂದವರು ಒತ್ತಾಯಿಸಿದರು.

ಈ ವರ್ಷ ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ಮುಷ್ಕರ ನಡೆಸಿದಾಗ ರಾಜ್ಯದ ಖಾಸಗಿ ಬಸ್‌ಗಳು ಸರಕಾರದ ಬೆಂಬಲಕ್ಕೆ ನಿಂತಿದ್ದವು. ಆದರೆ ಸರಕಾರ ನಮ್ಮ ಬಗ್ಗೆ ಯಾವುದೇ ಕಾಳಜಿ ತೋರಿಸದ ಹಿನ್ನೆಲೆಯಲ್ಲಿ ಮುಂದೆ ಸಿಬ್ಬಂದಿಗಳಿಗೆ ಬೆಂಬಲ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ ಎಂದರು.

ಟಿಕೇಟ್‌ನಲ್ಲಿ ಶೇ.20 ಹೆಚ್ಚಳ: ಲೀ.ಗೆ 65 ರೂ. ಇದ್ದ ಡೀಸೆಲ್ ದರ ಈಗ 96ಕ್ಕೇರಿದೆ. ನಮ್ಮ ಬಸ್‌ಗಳನ್ನು ಓಡಿಸುವುದರಿಂದ ಸರಕಾರಕ್ಕೆ ತಿಂಗಳಿಗೆ 120 ಕೋಟಿ ರೂ.ಡೀಸೆಲ್ ತೆರಿಗೆಯಿಂದಲೇ ಆದಾಯ ಬರುತ್ತದೆ. ಇದರಲ್ಲಿ ಕೇವಲ 80 ಕೋಟಿ ರೂ.ರಿಯಾಯಿತಿ ನೀಡಿ ಎಂದು ನಾವು ಕೇಳುತಿದ್ದೇವೆ. ಅಲ್ಲದೇ ಟೋಲ್ ವೇಳೆಯೂ ಸ್ಟೇಜ್‌ಕೇರಿಯರ್ ಬಸ್‌ಗಳನ್ನು ಇತರ ವಾಹನ ಗಳೊಂದಿಗೆ ತುಲನೆ ಮಾಡಬೇಡಿ. ಹೀಗಾಗಿ ಸ್ಟೇಜ್ ಕೇರಿಯರ್ ವಾಹನ (ಮಜಲು ವಾಹನ) ಕಾಯಕಲ್ಪ ನೀಡಬೇಕಾಗಿದೆ ಎಂದರು.

ಸದ್ಯ ರಾಜ್ಯದಲ್ಲಿ 8000 ಖಾಸಗಿ ಬಸ್‌ಗಳಲ್ಲಿ 2000 ಬಸ್‌ಗಳು ಓಡಾಟ ನಡೆಸುತ್ತಿವೆ. ಸರಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ನಮಗೆ ಟಿಕೇಟ್ ದರದಲ್ಲಿ ಹೆಚ್ಚಳ ಮಾಡಲು ಅವಕಾಶವಿದೆ. ಇದನ್ನು ಬಳಸಿ ಟಿಕೇಟ್ ದರದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಲು ನಿರ್ದರಿಸಲಾಗಿದೆ ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನೂತನ ಆಯ್ಕೆಯಾದ ಪದಾಧಿಕಾರಿಗಳಾದ ಲಿಂಗಾರೆಡ್ಡಿ, ಕೆ.ಕೆ.ಬಾಲಕೃಷ್ಣ ಭಟ್, ವಿಕ್ರಮ್, ಲಕ್ಷ್ಮೀ ನಾರಾಯಣ, ಜಯಪ್ರಕಾಶ್ ಶೆಣೈ, ಮಂಜುನಾಥ, ಕುಮಾರಸ್ವಾಮಿ, ದಿಲ್‌ರಾಜ್ ಆಳ್ವ, ಸದಾನಂದ ಛಾತ್ರ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News