×
Ad

ಮಂಗಳೂರು : ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮೂವರು ಹಿರಿಯ ನಾಗರಿಕರ ರಕ್ಷಣೆ

Update: 2021-07-09 21:36 IST

ಮಂಗಳೂರು, ಜು.9: ನಗರದ ಮಿನಿ ವಿಧಾನಸೌಧದ ಲಿಫ್ಟ್‌ನಲ್ಲಿ ಮೂವರು ಹಿರಿಯ ನಾಗರಿಕರು ಹೊರಬರಲಾಗದೆ ಸಿಲುಕಿ ಹಾಕಿಕೊಂಡ ಘಟನೆ ಶುಕ್ರವಾರ ನಡೆದಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ತೆರಳಿ ಮೂವರನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಚೇರಿ ಕೆಲಸದ ನಿಮಿತ್ತ ಮಿನಿ ವಿಧಾನಸೌಧಕ್ಕೆ ಬಂದಿದ್ದ ಮೂವರು ಹಿರಿಯ ನಾಗರಿಕರು ಲಿಫ್ಟ್ ಹತ್ತಿದ್ದರು. ಇವರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರಿದ್ದರು. ಲಿಫ್ಟ್ ಮೇಲೇರಿದ ಕೆಲವೇ ಕ್ಷಣಗಳಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಇದರಿಂದ ಗಲಿಬಿಲಿಗೊಂಡ ಮೂವರು ರಕ್ಷಣೆಗಾಗಿ ಮೊರೆ ಇಟ್ಟರು.

ಮಾಹಿತಿ ತಿಳಿದ ಮಿನಿ ವಿಧಾನಸೌಧದ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ ಠಾಣೆಗೆ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಯು ಲಿಫ್ಟ್‌ನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿದ್ದಾರೆ. ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News