‘ಶಿಕ್ಷಕರು ರಾಷ್ಟ್ರನಿರ್ಮಾಣಕ್ಕಾಗಿ’ ಐಟಾ ದಿಂದ ರಾಜ್ಯವ್ಯಾಪಿ ಆನ್‍ಲೈನ್ ಅಭಿಯಾನ

Update: 2021-07-09 17:13 GMT

ಭಟ್ಕಳ : ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕವು ಜುಲೈ 10ರಿಂದ 17 ರವರೆಗೆ “ಶಿಕ್ಷಕರು-ರಾಷ್ಟ್ರ ನಿರ್ಮಾಣಕ್ಕಾಗಿ” ಎಂಬ ಥೀಮ್ ನೊಂದಿಗೆ ರಾಜ್ಯವ್ಯಾಪಿ ಆನ್ ಲೈನ್ ಆಭಿಯಾನ ನಡೆಸಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ  ತಿಳಿಸಿದ್ದಾರೆ.

ಅವರು ಶುಕ್ರವಾರ ಭಟ್ಕಳದಲ್ಲಿ  ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. 

ಕೋವಿಡ್ ಸಾಂಕ್ರಮಿಕ ರೋಗವು ಎಲ್ಲ ಕ್ಷೇತ್ರಗಳನ್ನು ಬಾಧಿಸಿದಂತೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕ ಸಮುದಾಯದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಬೆಳಕು ಚೆಲ್ಲುವಂತಹ ಮತ್ತು ಪ್ರಭಾವಿತ ವರ್ಗಕ್ಕೆ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾದ್ಯಂತ ಆನ್‍ಲೈನ್ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಜು.10 ರಂದು ರಾತ್ರಿ 8ಗಂಟೆಗೆ ಝೂಮ್ ಮೂಲಕ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ವಿಧಾನ ಪರಿಷತ್ ಸಭಾಪತಿ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಆಭಿಯಾನ ಉದ್ಘಾಟಿಸಲಿದ್ದು, ಜ.ಇ.ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳ್ಗಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಐಟಾ ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಆಹ್ಮದ್ ಕೊತ್ವಾಲ್ ಅಧ್ಯಕ್ಷತೆ ವಹಿಲಿದ್ದಾರೆ ಎಂದು ಹೇಳಿದರು.

ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ,  ನ್ಯೂ ಶಮ್ಸ್ ಸ್ಕೂಲ್ ನ ಪ್ರಾಂಶುಪಾಲ ಲಿಯಾಖತ್ ಅಲಿ, ಕೇಂದ್ರಿಯ ಶಿಕ್ಷಣ ಕೇಂದ್ರದ  ನಿರ್ದೆಶಕ ಸೈಯ್ಯದ್ ತನ್ವೀರ್ ಆಹ್ಮದ್, ಮೌಲಾನ ಆಝಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಸಿದ್ದೀಖ್ ಮಹಮೂದ್, ಎ.ಜೆ.ಅಕಾಡೆಮಿಯ ನಿದೇರ್ಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್,  ಅಝೀಮ್ ಪ್ರೇಮಂಜಿ ವಿಶ್ವವಿದ್ಯಾಲಯದ ಪ್ರೊ. ಮುಜಾಹಿದುಲ್ ಇಸ್ಲಾಮ್, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಬೋರ್ಡ್ ಆಫ್ ಇಸ್ಲಾಮಿಕ ಎಜ್ಯುಕೇಶನ್ ಕಾರ್ಯದರ್ಶಿ ರಿಯಾಝ್ ಆಹ್ಮದ್ ರೋಣ, ಜ.ಇ.ಹಿಂದ್ ಕರ್ನಾಟಕದ ಮಾಜ್ಯ ರಾಜ್ಯಾಧ್ಯಕ್ಷ ಅಥರುಲ್ಲಾ ಷರಿಫ್ ಮುಂತಾದವರು ವೆಬಿನಾರ್ ನಲ್ಲಿ ಭಾಗವಹಿಸಲಿದ್ದಾರೆ. 

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಯಾಸೀನ್ ಭಿಕ್ಬಾ, ಉತ್ತರಕನ್ನಡ ಜಿಲ್ಲಾಧ್ಯಕ್ಷ ಅಲಿ ಮನೆಗಾರ್, ಭಟ್ಕಳ ತಾಲೂಕಾಧ್ಯಕ್ಷ ಇಮ್ರಾನ್ ಮುಲ್ಲಾ, ಐಟಾ ಮಹಿಳಾ ಜಿಲ್ಲಾ ಮಹಿಳಾ ಸಂಚಾಲಕಿ ಶಾಹೀನ್ ಬದರ್ ಸದಸ್ಯರಾದ ಮುಷ್ತಾಖ್ ಆಹ್ಮದ್ ಉಪಸ್ತಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News