ಕಟಪಾಡಿ: ಬಸ್ಸಿನ ಚಕ್ರದಡಿ ಸಿಲುಕಿದ ಬೈಕ್; ಸವಾರ ಮೃತ್ಯು
Update: 2021-07-10 10:54 IST
ಕಾಪು, ಜು.10: ಬಸ್ಸೊಂದು ಬೈಕಿಗೆ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಕಟಪಾಡಿ ಅಚ್ಚಡ ವಿದ್ಯಾನಗರ ನಿವಾಸಿ ಯಶೋಧರ ಆಚಾರ್ಯ (50) ಮೃತಪಟ್ಟವರು. ಕಟಪಾಡಿಯ ಗ್ಲಾಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಕಳೆದ ರಾತ್ರಿ ಬೈಕ್ ಸವಾರಿ ಮಾಡಿಕೊಂಡು ಶಿರ್ವ ರಸ್ತೆಯಿಂದ ಹೊರಟು ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಬೈಕ್ ಬಸ್ಸಿನ ಚಕ್ರದಡಿ ಸಿಲುಕಿ ಹೆದ್ದಾರಿಯಲ್ಲಿ ಸುಮಾರು 50 ಅಡಿ ದೂರಕ್ಕೆ ಎಳೆದೊಯ್ಯಲ್ಪಟ್ಟಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಯಶೋಧರ ಆಚಾರ್ಯ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.