ಕೇರಳದಲ್ಲಿ ಝೀಕಾ ವೈರಸ್ ಪತ್ತೆ: ದ.ಕ., ಉಡುಪಿ ಸಹಿತ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಆರೋಗ್ಯ ಇಲಾಖೆ ಸೂಚನೆ
ಮಂಗಳೂರು, ಜು. 10: ಕೇರಳದಲ್ಲಿ ಈಡಿಸ್ ಸೊಳ್ಳೆಯಿಂದ ಹರಡುವ ಝೀಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಚಾಮರಾಜನಗರ, ದ.ಕ. ಮತ್ತು ಉಡುಪಿಯಲ್ಲಿ ಹೆಚ್ಚು ಜಾಗರೂಕತೆ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಈಡಿಸ್ ರೋಗವಾಹಕ ಸೊಳ್ಳೆಗಳ ನಿಯಂತ್ರಣಕ್ಕೆ ನಿಗಾ ವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
‘‘ರಾಜ್ಯದ ಆರೋಗ್ಯ ಆಯುಕ್ತರಿಂದ ಝೀಕಾ ವೈರಸ್‌ಗೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣಕ್ಕೆ ಸಲಹೆಗಳು ಬಂದಿವೆ. ಅದರ ಜತೆಗೆ ಜಿಲ್ಲೆಯಲ್ಲಿ ಈ ಕುರಿತಂತೆ ತೀವ್ರ ರೀತಿಯ ಜಾಗೃತಿಗೆ ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ರೋಗಿಗಳಲ್ಲಿ ಆ ಕಾಯಿಲೆ ಕುರಿತಂತೆ ವೈದ್ಯರಿಗೆ ಯಾವುದೇ ರೀತಿಯ ಸಂಶಯ ಬಂದಾಗಲೂ ಸೂಕ್ತ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ’’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
‘‘ಕೇರಳದಿಂದ ದ.ಕ. ಜಿಲ್ಲೆಗೆ ಆಗಮಿಸುವವರ ತಪಾಸಣೆಗೆ ಸಂಬಂಧಿಸಿ ಈಗಾಗಲೇ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ ಕೋವಿಡ್ ಲಸಿಕಾ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿಲಾಗಿದೆ. ಉಳಿದಂತೆ ಝೀಕಾಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿಯೇನೂ ಇಲ್ಲ. ಸೊಳ್ಳೆಗಳಿಂದ ಈ ವೈರಸ್ ಹರಡುವುದರಿಂದ ರಾಜ್ಯದಿಂದ ಬರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಈ ಝೀಕಾ ವೈರಸ್‌ನ ಗುಣಲಕ್ಷಣಗಳನ್ನು ಪತ್ತೆಹಚ್ಚುವುದು ಕ್ಲಿನಿಕಲ್ ಆಧಾರದಲ್ಲಿ ಮಾಡಬೇಕಾಗುತ್ತದೆ. ಈ ಬಗ್ಗೆ ಯಾವುದೇ ಗಾಬರಿ ಬೇಡ. ಗಡಿಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ರೀತಿಯ ಯಾವ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುವುದು’’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಈಡಿಸ್ ಸೊಳ್ಳೆಯ ಪ್ರಸರಣ ಹೆಚ್ಚಾಗಿರುವುದರಿಂದ, ಈ ಸೊಳ್ಳೆಯಿಂದ ಈ ರೋಗ ಹರಡುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಿಸಿ ಮನೆಗಳು, ವಿಮಾನ ನಿಲ್ದಾಣಗಳು, ಬಂದರು ಹಾಗೂ ಗ್ರಾಮೀಣ ಮತ್ತು ನಗರದ ಜನವಸತಿ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆ ಲಾರ್ವಾಗಳ ಉತ್ಪತ್ತಿ ಬಗ್ಗೆ ಕಣ್ಗಾವಲು ಇರಿಸುವಂತೆ ಸೂಚಿಸಲಾಗಿದೆ. ರಾಸಾನಿಯಕ ಹಾಗೂ ಜೈವಿಕ ಸಿಂಪಡಣೆಯನ್ನೂ ಮಾಡುವಂತೆ, ಜತೆಗೆ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಆರೋಗ್ಯ ಆಯುಕ್ತರು ತಮ್ಮ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಝೀಕಾ ವೈರಸ್ ಸೋಂಕಿತರಲ್ಲಿ ಜ್ವರ, ತುರಿಕೆ, ಕೀಲುನೋವು ಮೊದಲಾದ ರೋಗಲಕ್ಷಣಗಳು ಕಂಡುಬರುತ್ತವೆ. ಶಂಕಿತ ರೋಗ ಲಕ್ಷಣಗಳಿರುವ ರೋಗಿಗಳಿಂದ ಮಾದರಿ ಸಂಗ್ರಹಿಸಿ ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಗೆ ಕಳುಹಿಸುವಂತೆಯೂ ಸೂಚನೆ ನೀಡಲಾಗಿದೆ.