ಉಡುಪಿ: ಮರಣಪತ್ರ ಬರೆದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ
ಉಡುಪಿ, ಜು.10: ಎರಡು ದಿನಗಳ ಹಿಂದೆ ಬ್ರಹ್ಮಾವರದ ಬೈಕಾಡಿ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಇಂದು ಬೆಳಗ್ಗೆ ಸಂತೆಕಟ್ಟೆ ಸಮೀಪದ ಉಪ್ಪೂರು ನದಿಯಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ.
ಮೃತರನ್ನು ಬೈಕಾಡಿ ಗ್ರಾಮದ ಕಾಮೇಶ್ವರ ದೇವಸ್ಥಾನ ವಠಾರದ ನಿವಾಸಿ ಶ್ರೀಧರ ಮಯ್ಯ(60) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಸಂತೆಕಟ್ಟೆ ಸಮೀಪದ ಉಪ್ಪೂರು ನದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಮೃತದೇಹವನ್ನು ಮೇಲೆತ್ತಿ ಮುಂದಿನ ಕ್ರಮಕ್ಕಾಗಿ ಆಸ್ಪತ್ರೆಗೆ ಸಾಗಿಸಿದರು. ಈ ನಡುವೆ ಮೃತದೇಹವನ್ನು ಶ್ರೀಧರ ಮಯ್ಯರದ್ದೆಂದು ಅವರ ಪತ್ನಿ ಹಾಗೂ ಪುತ್ರಿ ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನದ ಅಧ್ಯಕ್ಷರಿಗೆ ಮರಣ ಪತ್ರ ಕಳಿಸಿದ್ದರು
ಶ್ರೀಧರ ಮಯ್ಯ ಜು.8ರ ಸಂಜೆ 5:15ಕ್ಕೆ ಕೋರ್ಟ್ ಕೇಸಿನ ವಿಚಾರವಾಗಿ ಚಿಕ್ಕಮಗಳೂರಿಗೆ ಹೋಗುತ್ತಿದ್ದು, ನಾಲ್ಕು ದಿನಗಳ ಬಳಿಕ ಬರುವುದಾಗಿ ಪುತ್ರಿ ನವ್ಯಾರಲ್ಲಿ ತಿಳಿಸಿ ತೆರಳಿದ್ದರು. ಇವರು ತೆರಳಿದ ಬಳಿಕ ಮಯ್ಯ ಬರೆದಿದ್ದೆನ್ನಲಾದ ರಿಜಿಸ್ಟರ್ಡ್ ಪತ್ರವೊಂದು ದೇವಸ್ಥಾನಕ್ಕೆ ಬಂದಿತ್ತು. ದೇವಸ್ಥಾನದ ಅಧ್ಯಕ್ಷರಿಗೆ ಬರೆದ ಆ ಪತ್ರದಲ್ಲಿ "ನನ್ನ ಆರೋಗ್ಯ ತುಂಬಾ ಕೆಳಮಟ್ಟದಲ್ಲಿದೆ. ವಿಪರೀತ ಕಾಲುನೋವು ಹಾಗೂ ವಿಪರೀತ ಬಿಕ್ಕಳಿಕೆಯಿಂದ ಬದುಕಿನಲ್ಲಿ ಜಿಗುಪ್ಸೆಗೊಂಡಿದ್ದು, ಜೀವವೇ ಬೇಡವೆನಿಸಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿತ್ತೆನ್ನಲಾಗಿದೆ. ಈ ಬಗ್ಗೆ ಮನೆಯವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.