ಧರ್ಮಸ್ಥಳ ಗ್ರಾ.ಯೋಜನೆಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ

Update: 2021-07-10 09:33 GMT

ಮಂಗಳೂರು, ಜು. 10: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಇಂದು ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವಿಶ್ವಕ್ಕೇ ಮಾದರಿಯಾಗಿದೆ. ಇದೇ ಕಾರಣಕ್ಕೆ ಇದರ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದರು.

ಲಾಭಾಂಶ ವಿತರಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರದ ವಾರ್ಡ್‌ಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಹಾಗೂ ಇತರರ ನೆರವಿನಲ್ಲಿ ಕೇಂದ್ರ ಸರ್ಕಾರ ವಿಮಾ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ವೀಣಾ ಮಂಗಳಾ, ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್‌ನ ಹಣಕಾಸು ಪ್ರಾದೇಶಿಕ ಶಾಂತಾರಾಮ ಪೈ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕೃಷಿ ಅಧಿಕಾರಿ ಕಿರಣ್ ಉಪಸ್ಥಿತರಿದ್ದರು.

ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ತಾಲೂಕು ಯೋಜನಾಧಿಕಾರಿ ನಾಗೇಶ್ ವಂದಿಸಿದರು.


620 ಕೋಟಿ ರೂ. ಲಾಭಾಂಶ ದಾಖಲು

ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಎಸ್‌ಕೆಡಿಆರ್‌ಡಿಪಿಯಲ್ಲಿ ಪ್ರಸಕ್ತ 4.50 ಲಕ್ಷ ಸ್ವಸಹಾಯ ಗುಂಪುಗಳಿದ್ದು, 45 ಲಕ್ಷ ಮಂದಿ ಸದಸ್ಯರಿದ್ದಾರೆ. ಸುಮಾರು 620 ಕೋಟಿ ರೂ. ಲಾಭಾಂಶ ದಾಖಲಿಸಿದೆ. ಮಂಗಳೂರು ತಾಲೂಕಿನಲ್ಲಿ 2,300 ಸ್ವಸಹಾಯ ಗುಂಪುಗಳಿದ್ದು, 4.90 ಕೋಟಿ ರೂ. ಲಾಭಾಂಶವನ್ನು ಸದಸ್ಯರು ಪಡೆದಿದ್ದಾರೆ. ದ.ಕ. ಜಿಲ್ಲೆಯಲ್ಲಿ 24 ಸಾವಿರ ಸ್ವಸಹಾಯ ಗುಂಪುಗಳು 49 ಕೋಟಿ ರೂ. ಲಾಭಾಂಶ ದಾಖಲಿಸಿವೆ. ಬ್ಯಾಂಕ್‌ನಿಂದ ಸಾಲ ದೊರಕಿಸಿಕೊಡಲು ಸ್ವಸಹಾಯ ಗುಂಪುಗಳು ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿವೆ. ಪ್ರಸಕ್ತ ಮೂರು ವರ್ಷಗಳ ಸುಮಾರು 6 ಕೋಟಿ ರೂ.ಗಳಷ್ಟು ಲಾಭಾಂಶವನ್ನು ವಿತರಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News