×
Ad

ದ.ಕ.ಜಿಲ್ಲಾದ್ಯಂತ ತೀವ್ರಗೊಂಡ ಮಳೆ: ನಾಲ್ಕು ಮನೆಗಳಿಗೆ ಹಾನಿ

Update: 2021-07-10 19:33 IST

ಮಂಗಳೂರು, ಜು.10: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿದ್ದ ಮಳೆಯು ಶನಿವಾರ ತೀವ್ರಗೊಂಡಿದೆ. ಶನಿವಾರ ಬೆಳಗ್ಗೆ ಕೆಲಕಾಲ ಬಿಡುವು ಪಡೆದಿದ್ದ ಮಳೆಯು ಮಧ್ಯಾಹ್ನದ ಬಳಿಕ ತೀವ್ರಗೊಂಡಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಎರಡು ಭಾಗಶಃ ಮತ್ತು ಎರಡು ಸಂಪೂರ್ಣ ಸಹಿತ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಶನಿವಾರ ಮುಲ್ಕಿಯಲ್ಲಿ 16 ಸೆ.ಮೀ. ಮಳೆಯಾಗಿದ್ದರೆ, ಮಂಗಳೂರು ಮತ್ತು ಸುಬ್ರಹ್ಮಣ್ಯದಲ್ಲಿ ತಲಾ 7 ಸೆ.ಮೀ. ಮಳೆಯಾಗಿದೆ. ವಾಯುಭಾರದ ಕುಸಿತದಿಂದ ಕರಾವಳಿ ಜಿಲ್ಲೆಗಳಲ್ಲಿ ಜು, 11ರಿಂದ 14ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜು.11ರಂದು ರೆಡ್ ಅಲರ್ಟ್, ಜು.12-13ರಂದು ಆರೆಂಟ್ ಅಲರ್ಟ್, 14ರಂದು ರೆಡ್ ಅಲರ್ಟ್‌ನ್ನು ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶನಿವಾರ ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ ಅಂದರೆ 55.1 ಮಿ.ಮೀ.ಮಳೆಯಾದರೆ, ಕಡಬದಲ್ಲಿ ಅತೀ ಕಡಿಮೆ ಅಂದರೆ 42.6 ಮಿ.ಮೀ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿಯಲ್ಲಿ 45.1 ಮಿ.ಮೀ., ಮಂಗಳೂರಿನಲ್ಲಿ 46.8, ಪುತ್ತೂರಿನಲ್ಲಿ 52.4, ಸುಳ್ಯದಲ್ಲಿ 45.2, ಮೂಡುಬಿದಿರೆಯಲ್ಲಿ 52.7 ಸಹಿತ ಜಿಲ್ಲೆಯಲ್ಲಿ ಸರಾಸರಿ 48.5 ಮಿ.ಮೀ. ಮಳೆಯಾಗಿದೆ.

ಮೀನುಗಾರರಿಗೆ ಎಚ್ಚರಿಕೆ

ಸಮುದ್ರದಿಂದ ಗಂಟೆಗೆ 40-50 ಕಿ.ಮೀ.ನಿಂದ 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಜು.14ರವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News