‘ಸ್ವಚ್ಛ’ ಪ್ರಶಸ್ತಿ ಪುರಸ್ಕೃತ ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯದ ರಾಶಿ !
ಮಂಗಳೂರು, ಜು.10: ಕೇವಲ ಒಂದು ವರ್ಷದ ಹಿಂದೆ ‘ಅಭಿವೃದ್ಧಿ ಮತ್ತು ಸ್ವಚ್ಛತೆ’ಗಾಗಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಗುರುಪುರ ಗ್ರಾಪಂ ಇದೀಗ ತ್ಯಾಜ್ಯಮಯವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ತ್ಯಾಜ್ಯವನ್ನು ವಿಲೇ ಮಾಡುವ ಹೊಣೆ ಹೊತ್ತುಕೊಂಡಿದ್ದ ಗುತ್ತಿಗೆ ಸಂಸ್ಥೆಯ ಕಾಲಾವಧಿ ಮುಗಿದಿದುದೇ ಇದಕ್ಕೆ ಕಾರಣವಾಗಿದೆ. ಆದಾಗ್ಯೂ ಈ ಸಂಸ್ಥೆಯು ಕೊರೋನ ಭೀತಿಯ ಮಧ್ಯೆಯೂ ತ್ಯಾಜ್ಯ ವಿಲೇಮಾರಿ ಮಾಡಿ ಗಮನ ಸೆಳೆದಿತ್ತು. ಇದೀಗ ಕೊರೋನ ಹಿನ್ನಲೆಯಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ತೆರೆಯಲಾಗಿದೆ. ‘ಬ್ರೈಟ್’ ಎಂಬ ಹೊಸ ಗುತ್ತಿಗೆ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದ್ದು, ಅದಿನ್ನೂ ಕೆಲಸ ಕೈಗೆತ್ತಿಕೊಂಡಿಲ್ಲ. ಹಾಗಾಗಿ ಗ್ರಾಪಂ ವ್ಯಾಪ್ತಿಯ ಅಲ್ಲಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಗ್ರಾಪಂ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಎರಡು ವಾರದಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಿಲ್ಲ ಎನ್ನಲಾಗಿದೆ. ಇದರಿಂದ ಜನರು ರಸ್ತೆ ಬದಿ ಮತ್ತು ಜನವಸತಿ ಇರುವ ಪ್ರದೇಶದ ಗುಡ್ಡಗಳ ಖಾಲಿ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿರಾಶಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಾನುವಾರು ಸಹಿತ ಇತರ ಪ್ರಾಣಿಪಕ್ಷಿಗಳು ತ್ಯಾಜ್ಯ ಎಳೆದಾಡಿ ಅಲ್ಲಲ್ಲಿ ಹರಡುತ್ತಿದ್ದರೆ ಹಸಿ ತ್ಯಾಜ್ಯವು ಮಳೆ ನೀರಿಗೆ ಮತ್ತಷ್ಟು ಕೊಳೆತು ನಾರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಗ್ರಾಪಂ ವ್ಯಾಪ್ತಿಯ ಅಲ್ಲಲ್ಲಿ ತ್ಯಾಜ್ಯ ರಾಶಿಬಿದ್ದಿರುವ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಕರೆಯಲಾಗಿದ್ದು, ಬ್ರೈಟ್ ಎಂಟರ್ ಪ್ರೈಸೆಸ್ ಸಂಸ್ಥೆಯು ಗುತ್ತಿಗೆ ಪಡೆದಿದೆ. ಶೀಘ್ರ ಈ ಸಂಸ್ಥೆ ಕಾರ್ಯಾರಂಭ ಮಾಡಲಿದೆ’ ಎಂದು ಪಿಡಿಒ ಅಬೂಬಕರ್ ತಿಳಿಸಿದ್ದಾರೆ.