×
Ad

ಸುಳ್ಯ: ಜೀತ, ಬಾಲ ಕಾರ್ಮಿಕ ಪದ್ಧತಿ ಆರೋಪ; 7 ಮಕ್ಕಳ ರಕ್ಷಣೆ

Update: 2021-07-10 20:40 IST

ಸುಳ್ಯ, ಜು.10: ಸುಳ್ಯ ತಾಲೂಕಿನ ಪಂಜ ಸಮೀಪದ ಕರಿಕ್ಕಳದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮಕ್ಕಳು, ಮಹಿಳೆಯರನ್ನು ಸಂಬಳ ರಹಿತವಾಗಿ ದುಡಿಸಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿ ಏಳು ಬಾಲ ಕಾರ್ಮಿಕರನ್ನು ರಕ್ಷಿಸಿದೆ.

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಕರಿಕ್ಕಳದಲ್ಲಿರುವ ವಿಶ್ವನಾಥ ಭಟ್ ಎಂಬವರ ಮನೆ ಮೇಲೆ ಶುಕ್ರವಾರ ಈ ಕಾರ್ಯಾಚರಣೆ ನಡೆದಿದೆ. ಈ ವೇಳೆ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ, ಬಾಲ ಕಾರ್ಮಿಕರನ್ನು ದುಡಿಸುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಆರೋಪ:  ವಿಶ್ವನಾಥ ಭಟ್ ಎಂಟರಿಂದ ಹತ್ತು ಮಕ್ಕಳು ಹಾಗೂ ಮಹಿಳೆಯರನ್ನು ಯಾವುದೇ ಸಂಬಳವನ್ನು ನೀಡದೆ ದುಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ಪುಟ್ಟ ಮಕ್ಕಳು ದನ ಮೇಯಿಸುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಸಂಘಟನೆ ಬಚ್‌ಪನ್ ಬಚಾವೋ ಆಂದೋಲನ್ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ದೂರು ನೀಡಿತ್ತು.

'ಬಚ್‌ ಪನ್ ಬಚಾವೋ ಆಂದೋಲನ್' ದೂರಿನ ಅನ್ವಯ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರು ಈ ಬಗ್ಗೆ ವಿವರ ಪಡೆದು ಸಂತ್ರಸ್ತರ ರಕ್ಷಣೆ ಮಾಡುವಂತೆ ದ.ಕ. ಜಿಲ್ಲಾಧಿಕಾರಿಗೆ ಆದೇಶಿಸಿದ್ದರು. ದ.ಕ. ಜಿಲ್ಲಾಧಿಕಾರಿ ಸೂಚನೆಯಂತೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ನೇತೃತ್ವದಲ್ಲಿ ಸುಳ್ಯ ಸಿಡಿಪಿಒ ರಶ್ಮಿ ನೆಕ್ರಾಜೆ, ಬಚ್ ಪನ್ ಬಚಾವೋ ರಾಜ್ಯ ಸಮನ್ವಯಾಧಿಕಾರಿ ಬಿನು ವರ್ಗೀಸ್, ಬಾಲ ಕಾರ್ಮಿಕ ಅಧಿಕಾರಿಗಳು, ಪುತ್ತೂರು ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಸುಬ್ರಹ್ಮಣ್ಯ ಪೊಲೀಸರು, ಪಂಜ ಗ್ರಾಮ ಪಂಚಾಯತ್ ಅಧಿಕಾರಿಗಳು ಶುಕ್ರವಾರ ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಒಟ್ಟು ನಾಲ್ವರು ಬಾಲಕಿಯರು, ಮೂವರು ಬಾಲಕರನ್ನು ರಕ್ಷಿಸಲಾಗಿದೆ. ಅವರನ್ನು ಜಿಲ್ಲಾ ಶಿಶು ಪಾಲನಾ ಕೇಂದ್ರದ ಮುಂದೆ ಹಾಜರುಪಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

''ನನ್ನ ಮನೆಗೆ ಕೆಲಸ ಕೇಳಿಕೊಂಡು ಬಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕೆಲಸ ಕೊಟ್ಟಿದ್ದೇನೆ. ಅವರ ಮಕ್ಕಳಲ್ಲಿ ಕೆಲವರನ್ನು ಹಾಸ್ಟೆಲ್‌ಗಳಿಗೆ ಸೇರಿಸಿ, ಮತ್ತು ಇನ್ನೂ ಕೆಲವರನ್ನು ಇಲ್ಲಿ ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದೇವೆ. ಯಾವ ಮಕ್ಕಳನ್ನೂ ದುಡಿಸಿಕೊಳ್ಳುತ್ತಿಲ್ಲ''.

-ವಿಶ್ವನಾಥ ಭಟ್ ಕರಿಕ್ಕಳ

''ವಿಶ್ವನಾಥ ಭಟ್ ತಾನು ಸಾಮಾಜಿಕ ಸೇವೆ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದವರನ್ನು ಸಾಕುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ಒದಗಿಸಿಲ್ಲ. ಎರಡು ದಿನಗಳೊಳಗೆ ಈ ಬಗ್ಗೆ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸ ಲಾಗಿದೆ. ಇಲ್ಲವಾದಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗವುದು''.

-ಅನಿತಾಲಕ್ಷ್ಮೀ, ತಹಶೀಲ್ದಾರ್, ಸುಳ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News