ಅಧ್ಯಕ್ಷನಾಗಿ ಸೇವೆಯ ನನ್ನ ಜವಾಬ್ದಾರಿ ಹೆಚ್ಚಾಗಿದೆ: ಮುಹಮ್ಮದ್ ವಳವೂರು
ಬಂಟ್ವಾಳ, ಜು.10: ರೋಟರಿ ಕ್ಲಬ್ ಬಂಟ್ವಾಳದ 2021-22ನೇ ಸಾಲಿನ ನೂತನ ಅಧ್ಯಕ್ಷ ಮುಹಮ್ಮದ್ ವಳವೂರು ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶುಕ್ರವಾರ ರಾತ್ರಿ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಮೆಮೋರಿಯಲ್ ಸಭಾಂಗಣ ದಲ್ಲಿ ನಡೆಯಿತು.
ನಿರ್ಗಮನ ಅಧ್ಯಕ್ಷ ರೊ. ನಾರಾಯಣ ಹೆಗ್ಡೆ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲೂ ಕ್ಲಬ್ ಅತ್ಯುತ್ತಮ ಕಾರ್ಯಗಳನ್ನು ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ರೋಟರಿ ಫೌಂಡೆಶನ್‌ಗೆ ವಿಶೇಷ ದೇಣಿಗೆ ನೀಡಿದ ಮೇಜರ್ ಡೋನರ್ ಮಂಜುನಾಥ ಆಚಾರ್ಯ ಹಾಗೂ ಮೇಘಾ ಆಚಾರ್ಯ, ನಿಯೋಜಿತ ಗವರ್ನರ್, ಕ್ಲಬ್ ನ ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ್ ಮತ್ತಿತರರನ್ನು ಗೌರವಿಸಲಾಯಿತು.
ಪೂರ್ವ ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ್ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿ ಬಂಟ್ವಾಳ ರೋಟರಿ ಕ್ಲಬ್ ಎಲ್ಲಾ ರೀತಿಯಲ್ಲು ಪರಿಪೂರ್ಣ ಕ್ಲಬ್ ಆಗಿ ಗುರುತಿಸಿದೆ ಎಂದು ಶ್ಲಾಘಸಿದರು. ಅಧ್ಯಕ್ಷರಾಗಿ ಮುಹಮ್ಮದ್ ವಳವೂರು, ಕಾರ್ಯದರ್ಶಿಯಾಗಿ ಧನಂಜಯ ಬಾಳಿಗ ಕೋಶಾಧಿಕಾರಿಯಾಗಿ ಬೇಬಿ ಕುಂದರ್ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಮುಹಮ್ಮದ್ ವಳವೂರು, 2012ರಲ್ಲಿ ಕ್ಲಬ್ ನ ಸದಸ್ಯನಾಗಿ ಸೇರ್ಪಡೆಯಾದಾಗ ಇದರ ಅಧ್ಯಕ್ಷನಾಗುವೆ ಎಂಬ ನಿರೀಕ್ಷೆ ಇರಲಿಲ್ಲ. ಇಂದು ನಾನು ಅನಿರೀಕ್ಷಿತವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಈ ಮೂಲಕ ನನ್ನ ಸೇವೆಯ ಜವಾಬ್ದಾರಿ ಹೆಚ್ಚಾಗಿದೆ. ನನ್ನ ಅವಧಿಯಲ್ಲಿ ಕ್ಲಬ್ ನ ಘನತೆಗೆ ಯಾವುದೇ ಧಕ್ಕೆ ಬಾರದಂತೆ ಜಾಗೂರಕತನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಸೇವಾಕಾರ್ಯಕ್ರಮದ ಅಂಗವಾಗಿ ಕರೋನಾ ರೋಗದಿಂದ ಪಾಲಕರನ್ನು ಕಳೆದುಕೊಂಡ ಸಜೀಪ ಮೂಡಗ್ರಾಮದ ಬಡ ಕುಟುಂಬ ವಿದ್ಯಾರ್ಥಿ ಗಳಿಗೆ ಕ್ಲಬ್ ನ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭ ಉಪ್ಪಿನಂಗಡಿ ಕ್ಲಬ್ ನ ಚಂದಪ್ಪ ಮೂಲ್ಯ ಅವರು ಇಬ್ಬರ ಬಾಲಕಿಯರ ಪೈಕಿ ಒರ್ವಾಕೆಯ ಪೂರ್ತಿ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲೆ 3181 ವಲಯ 4 ರ ಸಹಾಯಕ ಗವರ್ನರ್ ಸುರೇಂದ್ರ ಕಿಣಿ ಭಾಗವಹಿಸಿ ನೂತನ ಅಧ್ಯಕ್ಷರು ಹಾಗೂ ಅವರ ತಂಡಕ್ಕೆ ಶುಭ ಕೋರಿದರು. ನಿರ್ಗಮನ ಕಾರ್ಯದರ್ಶಿ ವಾಣಿ ಕಾರಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಧನಂಜಯ ಭಾಳಿಗ ವಂದಿಸಿದರು. ರೋ. ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.