ಶಾಶ್ವತ ಶಾಂತಿಗೆ ಅಫ್ಘಾನ್ ನೇತೃತ್ವದ ಶಾಂತಿ ಪ್ರಕ್ರಿಯೆಗೆ ಬೆಂಬಲ ಅಗತ್ಯ: ಅಮೆರಿಕ

Update: 2021-07-10 17:06 GMT

ವಾಶಿಂಗ್ಟನ್, ಜು. 10: ಅಫ್ಘಾನಿಸ್ತಾನದಲ್ಲಿ ಶಾಶ್ವತ ಶಾಂತಿ ನೆಲೆಸಲು ಪ್ರಾದೇಶಿಕ ಒಮ್ಮತ ಮತ್ತು ಅಫ್ಘಾನ್ ನೇತೃತ್ವದ ಶಾಂತಿ ಪ್ರಕ್ರಿಯೆಗೆ ಬೆಂಬಲದ ಅಗತ್ಯವಿದೆ ಎಂದು ಅಮೆರಿಕ ಹೇಳಿದೆ. ಅದೇ ವೇಳೆ, ಯುದ್ಧಗ್ರಸ್ತ ದೇಶದ ಭವಿಷ್ಯದಲ್ಲಿ ಆ ದೇಶದ ನೆರೆಯ ದೇಶಗಳು ಹಾಗೂ ವಲಯದಲ್ಲಿರುವ ದೇಶಗಳು ಹೆಚ್ಚಿನ ಪಾತ್ರ ವಹಿಸಬೇಕಾಗಿದೆ ಎಂದಿದೆ.

ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಜೊತೆ ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಟೆಲಿಫೋನ್ನಲ್ಲಿ ಮಾತುಕತೆ ನಡೆಸಿದ ಗಂಟೆಗಳ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೋ ಸೈನಿಕರ ಸಂಪೂರ್ಣ ವಾಪಸಾತಿಯ ಹಿನ್ನೆಲೆಯಲ್ಲಿ ಪಾಕ್ ವಿದೇಶ ಸಚಿವ ಮತ್ತು ಅಮೆರಿಕ ವಿದೇಶ ಕಾರ್ಯದರ್ಶಿ ನಡುವೆ ಮಾತುಕತೆ ನಡೆದಿದೆ.

ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಬೃಹತ್ ಪ್ರಮಾಣದ ಭೂಭಾಗಗಳನ್ನು ವಶಪಡಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಾತುಕತೆ ಮಹತ್ವ ಪಡೆದುಕೊಂಡಿದೆ. ತಾಲಿಬಾನ್ ಭಯೋತ್ಪಾದಕರು ಈಗ ಅಫ್ಘಾನಿಸ್ತಾನದ ಸುಮಾರು ಮೂರನೇ ಒಂದರಷ್ಟು ಭೂಭಾಗದ ಮೇಲೆ ನಿಯಂತ್ರಣ ಹೊಂದಿದ್ದಾರೆ ಎನ್ನಲಾಗಿದೆ.

‘‘ಅಫ್ಘಾನಿಸ್ತಾನದ ನೆರೆಯ ದೇಶಗಳು ಮತ್ತು ಈ ವಲಯದಲ್ಲಿರುವ ದೇಶಗಳು ಆ ದೇಶದ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರೋರ್ವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News