×
Ad

ಅಪಘಾನಿಸ್ತಾನದಲ್ಲಿ 109 ತಾಲಿಬಾನ್ ಉಗ್ರರ ಹತ್ಯೆ: ಸೇನೆಯ ಹೇಳಿಕೆ

Update: 2021-07-10 23:07 IST
ಸಾಂದರ್ಭಿಕ ಚಿತ್ರ

‌ಕಾಬೂಲ್, ಜು.10: ದೇಶದ ದಕ್ಷಿಣ ಪ್ರಾಂತ್ಯದಲ್ಲಿ ತಾಲಿಬಾನ್ ಪಡೆಗಳ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆದಿದ್ದು ಕನಿಷ್ಟ 109 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಿದ್ದು 25 ಉಗ್ರರು ಗಾಯಗೊಂಡಿದ್ದಾರೆ ಎಂದು ಅಪಘಾನಿಸ್ತಾನದ ಸೇನಾಪಡೆ ಶನಿವಾರ ಹೇಳಿದೆ. ಮೃತರಲ್ಲಿ ತಾಲಿಬಾನ್ ನ ಇಬ್ಬರು ಪ್ರಮುಖ ಸ್ಥಳೀಯ ಮುಖಂಡರಾದ ತಝಗುಲ್ ಮತ್ತು ನೆಹ್ಮಾನ್ ಸೇರಿದ್ದಾರೆ ಎಂದು ಮೂಲಗಳು ಹೇಳಿವೆ. 

ಕಂಧಹಾರ್ ಪ್ರಾಂತ್ಯದಲ್ಲಿ ಅಪಘಾನ್ ನ್ಯಾಷನಲ್ ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಫೋರ್ಸ್(ಎಎನ್ಡಿಎಸ್ಎಫ್)ನ ಯೋಧರು ಅಪಘಾನ್ ವಾಯುಪಡೆಯ ಬೆಂಬಲದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ 70 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದ್ದು ಇತರ 8 ಉಗ್ರರು ಗಾಯಗೊಂಡಿದ್ದಾರೆ ಎಂದು ಸೇನೆಯ 205ನೇ ಅಟ್ಟಲ್ ಕಾರ್ಪ್ಸ್ ನ ಹೇಳಿಕೆ ತಿಳಿಸಿದೆ. 

ಶುಕ್ರವಾರ ಎಎನ್ಡಿಎಸ್ಎಫ್ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಪಡೆಗಳು ಕಂದಹಾರ್ ನಗರದೊಳಗೆ ನುಸುಳಲು ಪ್ರಯತ್ನಿಸಿದ್ದು ಇದನ್ನು ವಿಫಲಗೊಳಿಸಲಾಗಿದೆ. ನೆರೆಯ ಹೆಲ್ಮಂಡ್ ಪ್ರಾಂತ್ಯದಲ್ಲಿ 39 ತಾಲಿಬಾನ್ ಉಗ್ರರು ಹತರಾಗಿದ್ದು 17 ಮಂದಿ ಗಾಯಗೊಂಡಿದ್ದಾರೆ. ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್ ಸಿಟಿಯ ಹೊರಭಾಗದಲ್ಲಿನ ಖಲಾ-ಎ-ಬುಲಾನ್ನಲ್ಲೂ ತಾಲಿಬಾನ್ ಪಡೆಗಳಿಗೆ ಭಾರೀ ಹೊಡೆತ ನೀಡಲಾಗಿದ್ದು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಲಾಗಿದೆ ಎಂದು ಸೇನಾ ಪಡೆ ಹೇಳಿದೆ. 

ಸೇನಾಪಡೆಯ ಹೇಳಿಕೆಗೆ ತಾಲಿಬಾನ್ ಪಡೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ . ಅಮೆರಿಕ ಮತ್ತು ನೇಟೋ ಪಡೆಗಳು ಅಪಘಾನಿಸ್ತಾನದಿಂದ ಸೇನೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದಂದಿನಿಂದ ಆ ದೇಶದಲ್ಲಿ ತಾಲಿಬಾನ್ ಪಡೆಗಳು ಆಕ್ರಮಣ ತೀವ್ರಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News