ಏಕಪಾತ್ರಾಭಿನಯ ಮಾಡುತ್ತಿರುವ ಪ್ರಧಾನಿ ಮೋದಿ ಮಹಾ ನಾಟಕಕಾರ: ಬಿ.ಕೆ.ಹರಿಪ್ರಸಾದ್

Update: 2021-07-11 13:11 GMT

ಭಟ್ಕಳ, ಜು.17: ದೇಶದಲ್ಲಿ ಪ್ರತಿ ದಿನವೂ ಒಂದಿಲ್ಲೊಂದು ನಾಟಕವನ್ನಾಡಿ ಏಕಪಾತ್ರಾಭಿನಯ ಮಾಡುತ್ತಿರುವ ನರೇಂದ್ರ ಮೋದಿ ಮಹಾ ನಾಟಕಕಾರರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವ್ಯಂಗ್ಯವಾಡಿದರು.

ಅವರು ರವಿವಾರ ಇಲ್ಲಿನ ಭಟ್ಕಳ ಅರ್ಬನ್ ಬ್ಯಾಂಕಿನ ಹಫಿಜ್ಕಾ ಹಾಲ್ ನಲ್ಲಿ ಆಯೋಜಿಸಿದ್ದ 'ಸಹಾಯಹಸ್ತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗಾಗಲೇ ಶತಕವನ್ನು ದಾಟಿದ್ದು ಬಿಜೆಪಿಯ ಮೂರ್ಖ ಭಕ್ತರು ಅದನ್ನೇ ದೊಡ್ಡ ಸಾಧನೆ ಎಂದು ಸಂಭ್ರಮಿಸುತ್ತಿದ್ದಾರೆ  ಬೆಲೆ ಏರಿಕೆಯಿಂದಾಗಿ ಯಾವ ರೀತಿ ಜನಸಾಮಾನ್ಯ ತತ್ತರಿಸುತ್ತಿದ್ದಾನೆ ಎನ್ನುವುದನ್ನು ಅವರು ಮರೆತು ಹೋಗಿದ್ದಾರೆ. ಹಣಕಾಸು ಸಚಿವರಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದು ಹೇಳಿದ್ದಕ್ಕೆ ನಾನು ಈರುಳ್ಳಿ ತಿನ್ನಲ್ಲ ಎಂದು ಉತ್ತರಿಸುತ್ತಾರೆ. ಪೆಟ್ರೋಲ್ ಬೆಲೆ ಹೆಚ್ಚಿದ್ದಕ್ಕೆ ಕೇಳಿದರೆ ಇಂದಿನ ಯುವಕರು ಬೈಕ್ ಖರೀದಿಸಲ್ಲ, ಊಬರ್ ಓಲಾದಲ್ಲಿ ಓಡಾಡುತ್ತಾರೆ ಎಂಬ ಮೂರ್ಖತನದ ಉತ್ತರ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳಿದ್ದು, ಆರೋಗ್ಯ ಸಚಿವರ ರಾಜೀನಾಮೆಯಿಂದಲೇ ತಿಳಿದುಬರುತ್ತದೆ. ನರೇಂದ್ರ ಮೋದಿಯವರು ತಮ್ಮ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ರಾಸಾಯನಿಕ ಮತ್ತು ವ್ಯಾಕ್ಸಿನ್ ವಿಚಾರದಲ್ಲಿ ಸದಾನಂದ ಗೌಡರ ರಾಜೀನಾಮೆ ಪಡೆದುಕೊಂಡಿದ್ದು ಇವೆಲ್ಲವೂ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದೆ ಎನ್ನುವದನ್ನು ತೋರಿಸಿಕೊಡುತ್ತಿದೆ ಎಂದರು.

ಮಂತ್ರಿಗಳನ್ನು ಬಲಿಪಶುವನ್ನಾಗಿ ಮಾಡಿ ಹರಕೆಯ ಕುರಿಗಳನ್ನಾಗಿ ಮಾಡಿದ್ದಾರೆ. ಹೊರತು ಇದರ ಸಂಪೂರ್ಣ ಜವಾಬ್ದಾರಿಯನ್ನು ನರೇಂದ್ರ ಮೋದಿಯವರೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದು, ಜನರಿಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ರಾಜ್ಯದ ಪ್ರತಿ ಮನೆ ಮನೆಗೆ ಭೇಟಿಕೊಟ್ಟು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು. 

ದೇಶದಲ್ಲಿ ಕೋವಿಡ್ ನಿಂದ ಸತ್ತವರನ್ನು ಅಕಸ್ಮಿಕ ಮರಣ ಮತ್ತು ನ್ಯಾಚುರಲ್ ಡೆತ್ ಎಂದು ಹೇಳುತ್ತಿದ್ದು ಈ ಹಿನ್ನೆಲೆಯಲ್ಲಿ ಜನರಿಗೆ ಸರಿಯಾದ ಮಾಹಿತಿ ಮತ್ತು ಪರಿಹಾರವನ್ನು ದೊರಕಿಸಿಕೊಡುವ ಉದ್ದೇಶದೊಂದಿಗೆ ಕಾಂಗ್ರೆಸ್ ಕಾರ್ಯಕತ್ರರು ಮನೆ ಮನೆಗೆ ಭೇಟಿ ಮಾಹಿತಿ ಸಂಗ್ರಹಿಸಿ ರವಾನಿಸಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಜು.7ರಂದು ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶಿವಕುಮಾರ್ ರವರು ಶಿರಸಿಯಲ್ಲಿ ಚಾಲನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. 

ಚುನಾವಣೆ ಹತ್ತಿರಕ್ಕೆ ಬರುತ್ತಿದೆ ಎಂದು ಈ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಬರುತ್ತೆ, ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿಲ್ಲ. ದೇಶದಲ್ಲಿ ಗುಲಾಮಗಿರಿ ನಿಲ್ಲಬೇಕು, ದೇಶವನ್ನು ಸ್ವತಂತ್ರಗೊಳಿಸಬೇಕು ಎನ್ನುವ ಉದ್ದೇಶದೊಂದಿಗೆ ಕಾಂಗ್ರೆಸ್ ಸ್ಥಾಪನೆಯಾಗಿದೆ ಎಂದ ಅವರು, ಸರ್ಕಾರ ಸಂಪೂರ್ಣ ವಿಫಲಗೊಂಡು ಜನ ಭಯಭೀತರಾಗಿದ್ದಾರೆ. ಅವರನ್ನು ಭಯದಿಂದ ಹೊರತರಬೇಕು ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮ ಹಾಕಿಕೊಂಡಿದ್ದೇವೆ, ಹೊರತು ಚುನಾವಣೆಯ ಯೋಚನೆ ನಮಗಿಲ್ಲ ಎಂದರು. 

ಹೊನ್ನಾವರ ಬಂದರು ಕಾಮಗಾರಿ ಕುರಿತಂತೆ ಸ್ಥಳಿಯ ಕಾಂಗ್ರೆಸಿಗರು ನಾಟಕವಾಡುತ್ತಿದ್ದಾರೆ ಎಂಬ ಆರೋಪ ಇದೆ ಎಂದು ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ನವರು ನಾಟಕ ಮಾಡುತ್ತಿಲ್ಲ. ಪ್ರತಿ ದಿನವೂ ನರೆಂದ್ರ ಮೋದಿಯವರು ನಾಟಕವಾಡುತ್ತಿದ್ದು ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಅವರಿಂದ ನಾವೇನು ಕಲಿಯಬೇಕಾಗಿಲ್ಲ ಎಂದರು. ಬಂದರು ಮೀನುಗಾರರಿಗೆ ಅನ್ಯಾಯವಾಗಿದೆ. ಅವರಿಗೆ ಪರಿಹಾರ ನೀಡಬೇಕು ಎಂದು ಕೇಳುತ್ತಿದ್ದೇವೆ ಎಂದರು. 

ನಾನು ದೇಶದಲ್ಲಿ 25 ವರ್ಷಗಳ ಕಾಲ 18 ರಾಜ್ಯಗಳಲ್ಲಿ ಓಡಾಡಿದ್ದೇನೆ. ಹಲವು ಮುಖ್ಯಮಂತ್ರಿಗಳನ್ನು ಮಾಡಿದ್ದೇನೆ. ಇದರ ಅರ್ಥ ಹರಿಪ್ರಸಾದ್ ಮುಖ್ಯಮಂತ್ರಿಯಾಗಲು ಓಡಾಡುತ್ತಿದ್ದಾನೆ ಎಂದಲ್ಲ. ಪಕ್ಷ ಗಟ್ಟಿಗೊಳಿಸಲು, ಅದರಲ್ಲಿ ಶಕ್ತಿ ತುಂಬಲು ಈ ಕೆಲಸ ಹೈಕಮಾಂಡ್ ನೀಡಿದೆ. ಅದನ್ನು ಮಾಡುತ್ತಿದ್ದೇನೆ ಎಂದರು. 

ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್, ಮಾಜಿ ಶಾಸಕ ಮಾಂಕಾಳ್ ವೈದ್ಯ, ಜೆ.ಡಿ.ನಾಯ್ಕ್, ಆರ್.ಎನ್.ನಾಯ್ಕ್, ಉಸ್ತುವಾರಿಗಳಾದ ವಿ.ಎಸ್.ಆರಾಧ್ಯ, ಜಿ.ವಿ. ಬಾವಾ, ವೆರೋನಿಕಾ, ಸುನೀತಾ ಶೆಟ್ಟಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ಹಿಂದುಳಿದ ವಿಭಾಗದ ಅಧ್ಯಕ್ಷ ನಾಗರಾಜ ನಾರ್ವೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News