×
Ad

ಉಪ್ಪಿನಂಗಡಿ : ಫೇಸ್ ಬುಕ್ ನಲ್ಲಿ ವಂಚನೆಗೆ ಯತ್ನ; ದೂರು ದಾಖಲು

Update: 2021-07-11 23:15 IST

ಉಪ್ಪಿನಂಗಡಿ: ವಿದೇಶಿಗನೆಂದು ಫೇಸ್ ಬುಕ್ ಗೆಳೆತನ ಬಯಸಿ ಗೆಳೆತನದ ನೆಲೆಯಲ್ಲಿ ಕಳುಹಿಸಿಕೊಡುವ ದುಬಾರಿ ಉಡುಗೊರೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂ. ದೋಚುವ ಪ್ರಯತ್ನಗಳು  ನಡೆಯುತ್ತಿದ್ದು,  ಜನರು ಎಚ್ಚರಿಕೆ ವಹಿಸಬೇಕೆಂದು ಪೊಲೀಸ್ ಅಧಿಕಾರಿ ಗಳು ವಿನಂತಿಸಿದ್ದಾರೆ.

ಜು. ಒಂದರಂದು  ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಗೆ ಫೇಸ್ ಬುಕ್ ಮೂಲಕ ತಾನು ಲಂಡನ್‍ನ ನ್ಯೂರೋ ಸರ್ಜನ್ ಎಂದು ಹೇಳಿಕೊಂಡು ಗೆಳೆತನ ಬಯಸಿದ ವ್ಯಕ್ತಿಯೋರ್ವ, ತನ್ನ ಪತ್ನಿ ಮಗುವಿಗೆ ಜನ್ಮ ನೀಡುವ ವೇಳೆ ಮೃತಪಟ್ಟಿದ್ದು, ಪ್ರಸಕ್ತ ತಾನು ಒಂಟಿ ತಂದೆಯಾಗಿದ್ದೇನೆ. ತನ್ನ ಮಗುವಿಗೆ ಮಮತೆಯ ತಾಯಿಯಾಗಿ ತನಗೆ ಮುದ್ದಿನ ಪತ್ನಿಯಾಗಿರಲು ಭಾರತೀಯ ಯುವತಿಯನ್ನು ಪರಿಚಯಿಸಬೇಕೆಂದು, ಹೀಗೆ ಪರಿಚಯಿಸಿದರೆ ನಿಮಗೆ ದೊಡ್ಡದಾದ ಉಡುಗೊರೆಯನ್ನು ನೀಡುವೆನೆಂದು ತಿಳಿಸುತ್ತಾರೆ. ಈ ಬಗ್ಗೆ ಸ್ಪಂದಿಸುವ ಭರವಸೆ ನೀಡಿದಾಗ ಪ್ರಾರಂಭಿಕ ಹಂತದಲ್ಲಿ ನಿಮಗೊಂದು ಗಿಫ್ಟ್ ಕಳುಹಿಸಲು ಇಚ್ಚಿಸುತ್ತಿದ್ದೇನೆ. ನಿಮ್ಮ ಮನೆಯ ವಿಳಾಸ ನೀಡಿ ಎಂದು ವಿನಂತಿಸಿ ವಿಳಾಸವನ್ನು ಪಡೆಯಲಾಗಿದೆ.

ಜು. 4 ರಂದು  ತಾನು ಗಿಫ್ಟ್ ಖರೀದಿಸಲು ಹೋಗುತ್ತಿದ್ದೇನೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಫೋಟೋವನ್ನು  ಕಳುಹಿಸಿದ ಆ ವ್ಯಕ್ತಿಯು ಬಳಿಕ ಹಲವು ಬಗೆಯ ಬೆಲೆ ಬಾಳುವ ವಸ್ತುಗಳ ಫೋಟೋವನ್ನು ಕಳುಹಿಸಿದ್ದಾನೆ. ಮಾತ್ರವಲ್ಲದೆ ಸದ್ರಿ ಉಡುಗೊರೆಗಳನ್ನು ಲಂಡನ್ ನಲ್ಲಿ ಕಸ್ಟಮ್ ಅಧಿಕಾರಿಗಳಿಗೆ  ನೀಡುವ , ಬಳಿಕ ಅದನ್ನು ಭಾರತಕ್ಕೆ ಹೊತ್ತೊಯ್ಯುವ ವಿಮಾನದ ಫೋಟೋವನ್ನು ಹಾಕಿ, ನಾನು ಕಳುಹಿಸಿದ ಉಡುಗೊರೆಯು ನಾಳೆ ನಿಮ್ಮ ಮನೆಗೆ ತಲುಪಲಿದೆ ಎಂದು ಸಂದೇಶವನ್ನು ನೀಡಿದ್ದಾನೆ.  ಇದಲ್ಲದೆ, ಉಡುಗೊರೆ ಬಾಕ್ಸ್ ನಲ್ಲಿ 30,000 ಅಮೆರಿಕನ್ ಡಾಲರ್ ಹಣವನ್ನು ಕಳುಹಿಸಿದ್ದೇನೆಂದು ತಿಳಿಸಿದ್ದಾನೆ.

ಮತ್ತೆ ಜು.5ರಂದು ಫೇಸ್ ಬುಕ್‍ನಲ್ಲಿ ಸಂಪರ್ಕ ಸಾಧಿಸಿದ ಆ ವ್ಯಕ್ತಿಯು ನಾನು ಕಳುಹಿಸಿದ ಗಿಫ್ಟ್ ಭಾರತವನ್ನು ತಲುಪಿದೆ. ಆದರೆ ಅಲ್ಲಿನ ಕಸ್ಟಮ್ ಅಧಿಕಾರಿಗಳು ಕಸ್ಟಮ್ ಕ್ಲಿಯರೆನ್ಸ್ ಗಾಗಿ 20,000 ಮೊತ್ತವನ್ನು ಕೇಳುತ್ತಿದ್ದಾರೆ . ನಾನು ಕಳುಹಿಸಿದ ಉಡುಗೊರೆಗಳು ದೊಡ್ಡ ಮೊತ್ತದವುಗಳಾಗಿರುವುದರಿಂದ ನೀವು 20,000 ಪಾವತಿಸಿದರೆ ತಕ್ಷಣವೇ ನಿಮ್ಮ ಮನೆಗೆ ಉಡುಗೊರೆ ತಲುಪಲಿದೆ ಎಂದು ತಿಳಿಸಿ ಉಡುಗೊರೆಯ ರವಾನಿಸುವ ಏಜೆನ್ಸಿ ಯದೆಂದು ಬಿಂಬಿಸಿ ಒಂದು ಬ್ಯಾಂಕ್ ಖಾತೆಯ ವಿವರವನ್ನು  ನೀಡಿ ಅದಕ್ಕೆ ಹಣ ಜಮೆ ಮಾಡಿ ಉಡುಗೊರೆಯನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಿ ಎಂದು ಸೂಚಿಸಿದ್ದಾನೆ.

ಇದು ಸಂಪೂರ್ಣ ವಂಚನೆಯ ಜಾಲವೆನ್ನುವುದನ್ನು ಮೊದಲೇ ಅರಿತ್ತಿದ್ದ ಈ ವ್ಯಕ್ತಿಯು ಈ ಎಲ್ಲಾ ಬೆಳವಣಿಗೆಯನ್ನು ಪ್ರಾರಂಭದ ಹಂತದಲ್ಲಿಯೇ ಪೊಲೀಸರ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ಪೊಲೀಸರ ಸೂಚನೆಯಂತೆ ಕೆಲವೊಂದು ಪ್ರಕ್ರಿಯೆಗಳನ್ನು ನಡೆಸಿ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಲು ಯತ್ನಿಸಲಾಯಿತ್ತಾದರೂ,  ಲಂಡನ್ ನಲ್ಲಿ ನ್ಯೂರೋ ಸರ್ಜನ್ ಎಂದು ಪರಿಚಯಿಸಿದ್ದ ವ್ಯಕ್ತಿ ದೆಹಲಿ ಯಲ್ಲಿರುವುದು ಪತ್ತೆಯಾಯಿತು. ಆದರೆ ಆತನ ನಿಖರ ವಿಳಾಸವನ್ನು ಪತ್ತೆ ಹಚ್ಚಲು ಅಸಾಧ್ಯವಾಯಿತು. ಇದೊಂದು  ವಿಧ ವಿಧದ ವರಸೆಯಲ್ಲಿ ಜನರನ್ನು ನಂಬಿಸಿ ವಂಚಿಸುವ ಜಾಲದವಾಗಿದ್ದು,  ಈಗಾಗಲೇ ಕೋಟ್ಯಾಂತರ ರೂ. ಹಣವನ್ನು ವಂಚಿಸಿರುವುದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ವಂಚಕರು ಯಾವುದೋ ಆ್ಯಪ್ ಮೂಲಕ ಸಾಮಾಜಿಕ  ಜಾಲತಾಣಗಳನ್ನು  ಪ್ರವೇಶಿಸಿ, ಅಮಾಯಕರ ಹೆಸರಿನಲ್ಲಿ ಖಾತೆಗಳನ್ನು ಸೃಷ್ಠಿಸಿ  ಹಣ ಕಬಳಿಸುವ ಕೃತ್ಯಗಳನ್ನು ಕಾನೂನು ಕಣ್ಣಿಗೆ ಸಿಗದಂತೆ ಮಾಡುತ್ತಿರುವುದು ಪತ್ತೆಯಾಗಿದೆ. ಆದ್ದರಿಂದ ಈ ಬಗ್ಗೆ ಸಮಾಜದ ಮಂದಿ ಜಾಗರೂಕರಾಗಿರುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News