ʼಅದ್ಭುತ ಅನುಭವʼ: ಅಂತರಿಕ್ಷದಿಂದ ಭೂಮಿಯನ್ನು ನೋಡಿ ಬಂದ ಭಾರತೀಯ ಮೂಲದ ಶಿರೀಶಾ ಬಂದ್ಲಾ ಉದ್ಗಾರ

Update: 2021-07-12 10:03 GMT
Photo: AP

ಹೌಸ್ಟನ್ :  ಅಂತರಿಕ್ಷದಿಂದ ಭೂಮಿಯನ್ನು ನೋಡುವುದು ಒಂದು ಅದ್ಭುತ ಮತ್ತು ಜೀವನವನ್ನೇ ಬದಲಾಯಿಸುವ ಅನುಭವ ಎಂದು ವರ್ಜಿನ್ ಗ್ಯಾಲಾಕ್ಟಿಕ್‍ನಲ್ಲಿ ತಮ್ಮ ಪ್ರಥಮ ಗಗನಯಾತ್ರೆಯಲ್ಲಿ ಪಾಲ್ಗೊಂಡ ಭಾರತೀಯ ಅಮೆರಿಕನ್ ಗಗನಯಾತ್ರಿ ಶಿರೀಶ ಬಂದ್ಲಾ ಹೇಳಿದ್ದಾರೆ.

ಏರೋನಾಟಿಕಲ್ ಇಂಜಿನಿಯರ್ ಆಗಿರುವ 34 ವರ್ಷದ ಬಂದ್ಲಾ ರವಿವಾರ ಬ್ರಿಟಿಷ್ ಬಿಲಿಯಾಧಿಪತಿ ರಿಚರ್ಡ್ ಬ್ರಾನ್ಸನ್ ಮತ್ತು ನಾಲ್ಕು ಮಂದಿ ಇತರರ ಜತೆ ವರ್ಜಿನ್ ಗ್ಯಲಾಕ್ಟಿಕ್‍ನ ಸ್ಪೇಸ್‍ಶಿಪ್ ಟು ಯುನಿಟಿಯಲ್ಲಿ ಮೆಕ್ಸಿಕೋದಿಂದ ಅಂತರಿಕ್ಷದ ತುತ್ತತುದಿಗೆ  ಪಯಣಿಸಿದ್ದಾರೆ.

ನ್ಯೂ ಮೆಕ್ಸಿಕೋದಿಂದ ಅವರು 88 ಕಿಮೀ ಎತ್ತರದ ತನಕ ಸಾಗಿ ಅಲ್ಲಿಂದ ಭೂಮಿಯ ಆಕಾರವನ್ನು ಸ್ಪಷ್ಟವಾಗಿ ನೋಡಿದರು. ಅಲ್ಲಿ ಸ್ವಲ್ಪ ಹೊತ್ತು ಕಳೆದು ಮತ್ತೆ ಅವರು  ಭೂಮಿಗೆ ವಾಪಸಾಗಿದ್ದಾರೆ.

"ನಾನಿನ್ನೂ ಅಲ್ಲಿಯೇ ಇದ್ದೇನೆ ಎಂದು ಅನಿಸುತ್ತಿದೆ. ಅದ್ಭುತ (ಇನ್‍ಕ್ರೆಡಿಬಲ್)ಕ್ಕಿಂತಲೂ ಉತ್ತಮ ಪದದ ಕುರಿತು ಯೋಚಿಸಿದರೂ ನನ್ನ ಮನಸ್ಸಿಗೆ ಹೊಳೆದಿದ್ದು ಆ ಪದ. ಈ ಅಂತರಕ್ಷ ಯಾತ್ರೆಯ ಅನುಭವವೇ ವಿಸ್ಮಯ" ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

"ಚಿಕ್ಕಂದಿನಿಂದಲೂ ಅಂತರಿಕ್ಷಕ್ಕೆ ಹೋಗಬೇಕೆಂಬುದು ನನ್ನ ಕನಸಾಗಿತ್ತು ಅದೀಗ ನನಸಾಗಿದೆ" ಎಂದು ಅವರು ಹೇಳಿದ್ದಾರೆ.

ನಾಸಾದಲ್ಲಿ ಗಗನಯಾತ್ರಿಯಾಗಬೇಕೆಂಬ ಆಸೆಯಿತ್ತು, ಆದರೆ ಅದು ಸಾಧ್ಯವಾಗದೆ ಈ ಮಾರ್ಗ ನಾನು ಅನುಸರಿಸಿದೆ ಎಂದು ಅವರು ಹೇಳಿದ್ದಾರೆ. ಅವರಿಗಿರುವ ಸ್ವಲ್ಪ ದೃಷ್ಟಿ ದೋಷ ಅವರನ್ನು ನಾಸಾ ಪ್ರವೇಶಕ್ಕೆ ಅನರ್ಹರನ್ನಾಗಿಸಿತ್ತು.

ಇದು ಕೇವಲ ಶ್ರೀಮಂತರ ಜಾಯ್ ರೈಡ್ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಮುಂದೆ ಇನ್ನೂ ಎರಡು  ಗಗನನೌಕೆಗಳು ನಿರ್ಮಾಣವಾಗುತ್ತಿದೆ ಆಗ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಆಂಧ್ರ ಪ್ರದೇಶದ ಗುಂಟೂರು ಮೂಲದವರಾಗಿರುವ ಶಿರೀಶ ಅವರು ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಬಾಹ್ಯಾಕಾಶಕ್ಕೆ ತೆರಳಿದ ಮೂರನೇ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News