×
Ad

ತಮಿಳುನಾಡಿನ ಪಳನಿಯಲ್ಲಿ ಕೇರಳ ಮಹಿಳೆಯನ್ನು ಹಿಂಸಿಸಿ ಅತ್ಯಾಚಾರಗೈದ ದುಷ್ಕರ್ಮಿಗಳ ಗುಂಪು: ಆರೋಪ

Update: 2021-07-12 18:09 IST

ಕಣ್ಣೂರು: ಕೇರಳ ಕಣ್ಣೂರು ಜಿಲ್ಲೆಯ 40 ವರ್ಷದ ಮಹಿಳೆಯೊಬ್ಬರಿಗೆ ತಮಿಳುನಾಡಿನ ಪಳನಿಯಲ್ಲಿ ದುಷ್ಕರ್ಮಿಗಳ ತಂಡವೊಂದು  ಹಿಂಸೆ ನೀಡಿ ನಂತರ ಆಕೆಯನ್ನು ಅತ್ಯಾಚಾರಗೈದಿದೆ ಎಂದು ಆರೋಪಿಸಲಾಗಿದೆ. ಮಹಿಳೆ ಮತ್ತಾಕೆಯ ಪತಿ ಕಣ್ಣೂರಿನಲ್ಲಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಜೂನ್ 20ರಂದು ನಡೆದಿದೆ ಎನ್ನಲಾಗಿದ್ದು ಮಹಿಳೆ ಮತ್ತಾಕೆಯ ಪತಿ ತಮಿಳುನಾಡು ಮೂಲದವರಾಗಿದ್ದಾರೆ. ಇಬ್ಬರೂ ಉದ್ಯೋಗ ನಿಮಿತ್ತ ಕಣ್ಣೂರಿನಲ್ಲಿ ನೆಲೆಸಿದ್ದಾರೆ.

ದಂಪತಿ ಇತ್ತೀಚೆಗೆ ಪಳನಿ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದರು. ಆ ಸಂದರ್ಭ ಮಹಿಳೆಯ ಪತಿ ಆಹಾರ ಖರೀದಿಸಲೆಂದು ಹೋಗಿದ್ದ ವೇಳೆ ದುಷ್ಕರ್ಮಿಗಳು ಮಹಿಳೆಯನ್ನು ಬಲವಂತವಾಗಿ ಹತ್ತಿರದ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅತ್ಯಾಚಾರವೆಸಗಿದವರಲ್ಲಿ ಲಾಡ್ಜ್ ಮ್ಯಾನೇಜರ್ ಕೂಡ ಸೇರಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆಯ ಪತಿ ಅಲ್ಲಿಗೆ ಆಗಮಿಸಿದಾಗ ಆತನ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದರೆನ್ನಲಾಗಿದೆ.  ದುಷ್ಕರ್ಮಿಗಳು ಮಹಿಳೆಯ ಜತೆ ಅಮಾನವೀಯವಾಗಿ ವರ್ತಿಸಿ ಆಕೆಯ ಖಾಸಗಿ ಭಾಗಗಳಿಗೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ  ತಿಳಿಸಲಾಗಿದೆ.

ಈ ಪ್ರಕರಣದ ಕುರಿತು ಮಾತನಾಡಿದ ತಲಶ್ಶೇರಿ ಡಿವೈಎಸ್ಪಿ ಮೂಸಾ ವಲ್ಲಿಕ್ಕಾಡನ್, "ಮಹಿಳೆಯ ವೈದ್ಯಕೀಯ ವರದಿಯಲ್ಲಿ ಗಾಯಗಳ ಕುರಿತು ಯಾವುದೇ  ಮಾಹಿತಿಯಿಲ್ಲ. ಅದೇ ಸಮಯ ಘಟನೆ ಜೂನ್ 20ರಂದು ನಡೆದಿದ್ದಲ್ಲಿ ಗಾಯಗಳು ಗುಣವಾಗಿರುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.

ಮಹಿಳೆ ಸದ್ಯ ಆಸ್ಪತ್ರೆಯಲ್ಲಿದ್ದು ಆಕೆಯ ಹೇಳಿಕೆ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News