ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನನ್ನ ಮೇಲೆ ಕಣ್ಣಿಟ್ಟಿದ್ದಾರೆ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಪಟೋಲೆ ಆರೋಪ

Update: 2021-07-12 12:58 GMT

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಮೈತ್ರಿಕೂಟದ ಪಾಲುದಾರರ ನಡುವಿನ ಬಿರುಕು ಇಂದು ಮತ್ತೊಮ್ಮೆ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದರು.

ಕಾಂಗ್ರೆಸ್ ತಳಮಟ್ಟದಲ್ಲಿ ಬಲಿಷ್ಠವಾಗುತ್ತಿದೆ.ಆದ್ದರಿಂದ ಎನ್‌ಸಿಪಿ ಮತ್ತು ಶಿವಸೇನೆ ಭಯಭೀತಗೊಂಡಿವೆ ಎಂದು ಈ ಹಿಂದೆ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪಗಳನ್ನು ಮಾಡಿದ್ದ ಪಟೋಲೆ ಹೇಳಿದರು.

ಲೋನಾವಾಲಾದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಪಟೋಲೆ, "ರಾಜ್ಯ ಸರಕಾರದಲ್ಲಿ ಶಿವಸೇನೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮುಖ್ಯಮಂತ್ರಿ ಹಾಗೂ  ಗೃಹ ಸಚಿವರ ಹುದ್ದೆಗಳನ್ನು ಅಲಂಕರಿಸಿವೆ. ಅವರು ಎಲ್ಲದರ ಬಗ್ಗೆ ವರದಿಗಳನ್ನು ಸ್ವೀಕರಿಸುತ್ತಾರೆ. ಯಾರು ಎಲ್ಲಿ ಪ್ರತಿಭಟಿಸುತ್ತಿದ್ದಾರೆ. ನಾನು ಏನು ಮಾಡುತ್ತಿದ್ದೇನೆ ಎಂದು ಅವರಿಗೆ ತಿಳಿದಿದೆ. ಸಿಎಂ ಹಾಗೂ ಉಪ ಮುಖ್ಯಮಂತ್ರಿ ನನ್ನ ಮೇಲೆ ನಿಗಾ ಇಡುತ್ತಿದ್ದಾರೆ"ಎಂದು ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ನಾಯಕ ಪಟೋಲೆ ಹೇಳಿದರು. 

ಮಹಾರಾಷ್ಟ್ರದಲ್ಲಿರುವ ಮೈತ್ರಿ ಸರಕಾರವು ತಾತ್ಕಾಲಿಕ. ಬಿಜೆಪಿ ಅಧಿಕಾರದಲ್ಲಿರುವುದನ್ನು ತಡೆಯಲು ಮಹಾ ವಿಕಾಸ್ ಅಘಾಡಿಯನ್ನು 5 ವರ್ಷಗಳಿಗಾಗಿ ರಚಿಸಿದ್ದೇವೆ ಎಂದು ಜೂನ್‌ನಲ್ಲಿ ಘೋಷಿಸಿದ್ದ ಪಟೋಲೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಸಮಾಧಾನಕ್ಕೆ ಕಾರಣವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News