×
Ad

ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ಕುರಿತು ದೂರುಗಳಿದ್ದರೆ ಈಗಲೂ ನೀಡಬಹುದು: ದ.ಕ. ಜಿಲ್ಲಾಧಿಕಾರಿ

Update: 2021-07-12 18:31 IST

ಮಂಗಳೂರು, ಜು. 12: ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಆಸ್ಪತ್ರೆಗಳಿಂದ ಅಧಿಕ ಶುಲ್ಕ ವಸೂಲು ಮಾಡಿರುವ ಕುರಿತು ದೂರುಗಳಿದ್ದರೆ ಈಗಲೂ ನೀಡಬಹುದು. ಅಂತಹ ದೂರುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಭರವಸೆ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಹೇಳಿಕೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ರೋಗಿಗಳಿಂದ ಅಧಿಕ ಶುಲ್ಕವನ್ನು ವಸೂಲು ಮಾಡಿದ ಆಸ್ಪತ್ರೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ವಸೂಲು ಮಾಡಲಾದ ಮೊತ್ತವನ್ನು ಆಸ್ಪತ್ರೆಗಳಿಂದ ಪಡೆದು ರೋಗಿಗಳಿಗೆ ವಾಪಾಸು ಮಾಡಬೇಕು. ಮಾತ್ರವಲ್ಲದೆ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ದ.ಕ. ಜಿಲ್ಲೆಯಲ್ಲಿ ಕೋವಿಡ್ 2ನೆ ಅಲೆಯ ಸಂದರ್ಭ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಸೇರಿದಂತೆ 60ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಎಲ್ಲಿಯೂ ಚಿಕಿತ್ಸೆಯನ್ನು ನಿರಾಕರಿಸಲಾಗಿಲ್ಲ.ಆಸ್ಪತ್ರೆಗಳಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಆರೋಗ್ಯ ಮಿತ್ರರ ನೇಮಕದ ಮೂಲಕ ಸೂಕ್ತ ನಿಗಾ ವಹಿಸಲಾಗಿತ್ತು.

ಚಿಕಿತ್ಸೆಗೆ ಸಂಬಂಧಿಸಿ ಬಿಲ್‌ಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ಅದರಂತೆ ಸಮಿತಿಯು 17 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಈಡಿ ಸ್ವಯಂ ಪ್ರೇರಿತವಾಗಿ 2802 ಪ್ರಕರಣಗಳನ್ನು ಪರಿಶೀಲಿಸಿದೆ. ಈ ಪೈಕಿ 66 ಪ್ರಕರಣಗಳಲ್ಲಿ ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದಿರುವುದು ಕಂಡು ಬಂದಿದ್ದು, ಸಂಬಂಧಪಟ್ಟ ಆಸ್ಪತ್ರೆಗಳಿಗೆ ಶೋಕಾಸು ನೋಟೀಸು ನೀಡಲಾಗಿದೆ. ಇದು ಜಿಲ್ಲಾಡಳಿತದಿಂದಲೇ ನಡೆಸಲಾಗಿರುವ ಕ್ರಮವಾಗಿದ್ದು, ಈಗಲು ಕೂಡಾ ಯಾರಿಗಾದರೂ ಅಧಿಕ ಶುಲ್ಕ ವಸೂಲು ಮಾಡಲಾಗಿದೆ ಎಂಬ ದೂರುಗಳಿದ್ದಲ್ಲಿ ನೇರವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬಹುದು ಎಂದು ಹೇಳಿದರು.

ಸ್ತ್ರೀ ಶಕ್ತಿ ಗುಂಪುಗಳಿಗೆ ಘನತ್ಯಾಜ್ಯ ನಿರ್ವಹಣೆ ಹೊಣೆ: ಪ್ರಥಮ ಹಂತದಲ್ಲಿ ತಾಲೂಕಿನ ತಲಾ 5ರಂತೆ 35 ಗುಂಪುಗಳ ಆಯ್ಕೆ
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯ 223 ಗ್ರಾಮ ಪಂಚಾಯತ್‌ಗಳಲ್ಲಿ 71 ಗ್ರಾಮಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸಿ ಸ್ವಚ್ಚ ಸಂಕೀರ್ಣದ ಘಟಕಕ್ಕೆ ತಂದು ವಿಲೇವಾರಿ ಮಾಡಲಾಗುತ್ತಿದೆ. ಇದೀಗ ಗ್ರಾಮ ಪಂಚಾಯತ್‌ಗಳಲ್ಲಿನ ತ್ಯಾಜ್ಯ ನಿರ್ವಹಣೆ ಹೊಣೆಯನ್ನು ಸ್ತ್ರೀ ಶಕ್ತಿ ಗುಂಪುಗಳ ಮೂಲಕ ನಿರ್ವಹಿಸಲು ನಿರ್ಧರಿಸಲಾಗಿದೆ. ಅದರಂತೆ ಪ್ರತಿ ತಾಲೂಕಿನಲ್ಲಿ 5ರಂತೆ ಒಟ್ಟು ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 35 ಸ್ತ್ರೀ ಶಕ್ತಿ ಗುಂಪುಗಳನ್ನು ಆಯ್ಕೆ ಮಾಡಿ ತ್ಯಾಜ್ಯ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಚರ್ಚೆಯ ವೇಳೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಸಭೆಯಲ್ಲಿ ಮೀನುಗಾರಿಕಾ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಸಂಜೀವ ಮಠಂದೂರು, ಯು.ಟಿ.ಖಾದರ್, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕರಾರಿ ಋಷಿಕೇಶ್ ಸೊನಾವಣೆ, ಡಿಸಿಪಿ ಹರಿರಾಂ ಶಂಕರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News