ಉಡುಪಿ: ಅಂಗನವಾಡಿ ನೌಕರರ ಬೇಡಿಕೆ ಈಡೇರಿಗೆ ಆಗ್ರಹಿಸಿ ಧರಣಿ
ಉಡುಪಿ, ಜು.12: ಕೊರೋನಾ ಮುಂಚೂಣಿ ಯೋಧರಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಪರಿಹಾರ ಹಣದಲ್ಲಿ ವ್ಯಾತ್ಯಾಸ ಮಾಡಲಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಅದೇ ರೀತಿ ನೌಕರರಿಗೆ ಸುರಕ್ಷತಾ ಸಾಧನಗಳು, ಅಪಾಯ ಭತ್ಯೆ ಮತ್ತು ಸೋಂಕಿಗೆ ಒಳಗಾದವರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಮತ್ತು ಚಿಕಿತ್ಸಾ ವೆಚ್ಚವನ್ನು ನೀಡಬೇಕೆಂದು ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಶೀಲ ನಾಡ ಒತ್ತಾಯಿಸಿದ್ದಾರೆ.
ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳ ಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಅಪ್ಲಿಕೇಶನ್ ಫೋಶನ್ ಟ್ರಾಕ್ ನಲ್ಲಿ ಪೌಷ್ಠಿಕಾಂಶಕ್ಕೆ ಸಂಬಂಧಿಸಿ ಫಲಾನುಭವಿಗಳ ಬಗ್ಗೆ ವರದಿ ಮಾಡಲು ಸೂಚಿಸಲಾಗಿದೆ. ಈ ಮೂಲಕ ಕೆಲಸ ಮಾಡದ ಕಾರ್ಯಕರ್ತರಿಗೆ ವೇತನ ಕಡಿತದ ಬೆದರಿಕೆ ಹಾಕಲಾಗುತ್ತಿದೆ. ಈ ಮಾನದಂಡವನ್ನು ತೆಗೆದುಹಾಕಬೇಕು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಪೋಷಕಾಂಶ ತೋಟಗಳನ್ನು ಮಾಡಲು ಇಲಾಖೆಯಿಂದ ಸೂಚನೆ ನೀಡಲಾಗಿದೆ. ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡ ಹಾಗೂ ಜಾಗ ಇಲ್ಲದಿರುವುದರಿಂದ ತೋಟ ಮಾಡಲು ಸಾಧ್ಯವಿಲ್ಲ. ಆದರಿಂದ ಇದನ್ನು ಕೂಡ ಕೈಬಿಡಬೇಕು. ಹೊಸ ಶಿಕ್ಷಣ ನೀತಿಯಂತೆ ಅಂಗನವಾಡಿಗಳು ಅಥವಾ ಅಂಗನವಾಡಿ ಮಾದರಿಯ ಇಸಿಸಿಇ ಕೇಂದ್ರಗಳ ಮೂಲಕ ಮಾತ್ರವೇ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು.
ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದ ಗೌರವಧನ ಪಾವತಿಸಬೇಕು. ಐಸಿಡಿಎಸ್ ಹೊರತುಪಡಿಸಿ ಬೇರೆ ಯಾವುದೇ ಹೆಚ್ಚುವರಿ ಕೆಲಸವನ್ನು ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ನೀಡಬಾರದು. ಕುಂದು ಕೊರತೆ ಪರಿಹಾರ ಸಮಿತಿಗಳನ್ನು ಎಲ್ಲ ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ರಚಿಸಬೇಕು. ಐಸಿಡಿಎಸ್‌ನ್ನು ಶಾಶ್ವತವಾಗಿಸಬೇಕು ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಖಾಯಂಗೊಳಿಸಬೆೀಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಆರ್. ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸ ಋಲಾಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಕೋಶಾಧಿಕಾರಿ ಯಶೋಧಾ, ಉಡುಪಿ ತಾಲೂಕು ಅಧ್ಯಕ,ಎ ಅಂಬಿಕಾ, ಕಾರ್ಯದರ್ಶಿ ಪ್ರಮೀಳಾ, ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ಸವಿತಾ, ಕಾಪು ಅಧ್ಯಕ್ಷೆ ಲೀಲಾ, ಕಾರ್ಯದರ್ಶಿ ಜಯಂತಿ, ಕೋಶಾಧಿಕಾರಿ ಗೀತಾ ಪಾಂಗಾಳ, ಸಿಐಟಿಯು ಮುಖಂಡ ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.