×
Ad

ಸುಳ್ಳು ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದರೆ ಬೀದಿಗಳಿದು ಹೋರಾಟ: ಅಶೋಕ್‌ಕುಮಾರ್ ಕೊಡವೂರು ಎಚ್ಚರಿಕೆ

Update: 2021-07-12 20:48 IST

ಉಡುಪಿ, ಜು.12: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ಹಿರ್ಗಾನ ರಾಧಾಕೃಷ್ಣ ನಾಯಕ್ ಅವರ ಮೇಲೆ ನಡೆದ ಬಿಜೆಪಿ ಪ್ರಾಯೋಜಿತ ಪೊಲೀಸ್ ದೌರ್ಜನ್ಯ ಖಂಡನೀಯ. ಕ್ಷೇತ್ರದ ಶಾಸಕರ ವಿರುದ್ಧ ಪೋಸ್ಟ್ ಹಾಕುತಿದ್ದ ಎಂಬ ಕಾರಣಕ್ಕೆ ಪರೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಈ ಸಂಚು ರೂಪಿಸಲಾಗಿದೆ. ಕಾರ್ಕಳ ಶಾಸಕರ ಒತ್ತಾಸೆಯಿಂದಾಗಿಯೇ ಹಳೆಯ ಪ್ರಕರಣವನ್ನು ಕೆದಕಲಾಗಿದೆ. ಇಡೀ ಪ್ರಕರಣ, ಸುಳ್ಳು ಆರೋಪದ ಕುರಿತಂತೆ ಸೂಕ್ತ ತನಿಖೆ ನಡೆಸದಿದ್ದರೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಕೊಡವೂರು, ಹಿರ್ಗಾನ ರಾಧಾಕೃಷ್ಣ ನಾಯಕ್ ಈಗಾಗಲೇ ತನ್ನ ಫೇಸ್‌ಬುಕ್ ಖಾತೆಯನ್ನು ನಕಲಿ ಸೃಷ್ಟಿಸಿ ಸೈನಿಕರನ್ನು ಅವಮಾನಿಸಿ ದೇಶದ್ರೋಹದ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಉತ್ತರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರೂ, ನಕಲಿ ಖಾತೆ ಸೃಷ್ಟಿಸಿ ಸೈನಿಕರ ಅವಹೇಳನದ ಪೋಸ್ಟ್ ಮಾಡಿದ ದೇಶದ್ರೋಹಿಗಳನ್ನು ಹಿಡಿಯುವ ಪ್ರಯತ್ನ ಮಾಡದೆ ಪೂರ್ವ ದ್ವೇಷದಿಂದ ರಾಧಾಕೃಷ್ಣ ನಾಯಕ್ ಮೇಲೆಯೇ ಕಾರ್ಕಳ ಎಸ್‌ಐ ಅವರ ಮೇಲೆ ಮಾಡಿರುವ ಹಲ್ಲೆ ಅತ್ಯಂತ ಅಮಾನುಷವಾದದು ಎಂದವರು ಹೇಳಿದ್ದಾರೆ.

ದೇಶದ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವಾಗಲೂ ಬದ್ಧ. ಹಿರ್ಗಾನ ರಾಧಾಕೃಷ್ಣ ನಾಯಕ್ ತಮ್ಮ ನಕಲಿ ಖಾತೆಯ ಬಗ್ಗೆ ಸೂಕ್ತ ತನಿಖೆ ನಡೆಸಲು ವರ್ಷಗಳ ಹಿಂದೆಯೇ ದೂರು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಹಳೇ ಸುಳ್ಳು ಕೇಸ್ ಆಧರಿಸಿ ಅನಾರೋಗ್ಯವನ್ನೂ ಲೆಕ್ಕಿಸದೆ ರಾಧಾಕೃಷ್ಣ ನಾಯಕ್ ಮೇಲೆ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಪೋಲಿಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕೆಂಬುದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಆಗ್ರಹಿಸಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಕಲಿ ಫೇಸ್‌ಬುಕ್ ಖಾತೆಯ ಬಗ್ಗೆ ತನಿಖೆ ಮಾಡದೆ ಸಿದ್ಧರಾಮಯ್ಯ ಅವರ ತನಿಖೆ ಬೇಡಿಕೆಯನ್ನೇ ನೆಪವಾಗಿರಿಸಿಕೊಂಡು ಜಿಲ್ಲಾ ಬಿಜೆಪಿ ಅಧ್ಯಕ್ಷರು, ಸಿದ್ಧರಾಮಯ್ಯ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಾರೆ ಎಂದು ಆರೋಪ ಹೊರಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಸತ್ಯದ ಅನ್ವೇಷಣೆಗೆ ಟೊಂಕಕಟ್ಟಿ ನಿಂತಿದೆ. ಈ ದ್ವೇಷದ ಪ್ರಕರಣ ತಮಗೆ ತಿರುಗು ಬಾಣವಾಗಬಹುದು ಎಂಬ ಸೂಚನೆ ದೊರಕಿ ಬಿಜೆಪಿ ಈ ಕೃತ್ಯಕ್ಕೆ ಮುಂದಾಗಿದೆ. ನಾಯಕ್ ದೇಶದ್ರೋಹದ ಪೋಸ್ಟ್ ಹಾಕಿದ್ದರೆ ಅವರ ಮೇಲೆ ಆರೋಪ ಹೊರಿಸುವುದರಲ್ಲಿ ತಪ್ಪಿಲ್ಲ. ಆದರೆ ಅವರ ದೂರಿನಂತೆ ನಕಲಿ ಪೋಸ್ಟ್‌ನ ಬಗ್ಗೆ ತನಿಖೆ ಮಾಡದೆ ಅವರು ತಪ್ಪೆಸಗಿದ್ದಾರೆ ಎಂಬ ನಿರ್ಣಯಕ್ಕೆ ಬರಲು ಪೊಲೀಸರಿಗೆ ಹೇಗೆ ಸಾಧ್ಯ ಎಂದು ಕೊಡವೂರುಲ ಪ್ರಶ್ನಿಸಿದ್ದಾರೆ.

ಸೈನಿಕರ ಬಗ್ಗೆ, ಹಿಂದೂಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿ ಪುಲ್ವಾಮ ದಾಳಿಯಲ್ಲಿ 44 ಜನ ಅಮಾಯಕ ಸೈನಿಕರು ಉಗ್ರರಿಂದ ಹತರಾದಾಗ ಅದಕ್ಕೆ ಕಾರಣವಾದ ಭದ್ರತಾ ವೈಫಲ್ಯವನ್ನು ಪ್ರಶ್ನಿಸಿಲ್ಲವೇಕೆ?. ಹಿಂದೂಗಳಿಂದ ಹಿಂದೂಗಳ ಹತ್ಯೆಯಾದಾಗ ಜಾಣ ಮೌನದ ಉದ್ದೇಶವೇನು? ಬಿಜೆಪಿ ಧರ್ಮ ಹಾಗೂ ಸೈನಿಕರನ್ನು ಮುಂದಿಟ್ಟುಕೊಂಡು ದೇಶದ ನೈಜ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನದಲ್ಲಿದೆ ಎಂದು ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News